ನಾಪೋಕ್ಲು, ಅ. ೧೦: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಮಲೀನವಾಗುತ್ತಿದ್ದು, ಕಾವೇರಿ ನದಿ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ ಎಂದು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಕೊಟ್ಟಮುಡಿ ಹೇಳಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಮುಂದಾಳತ್ವದಲ್ಲಿ ಧರ್ಮಸ್ಥಳ ಹಾಗೂ ಸಂಜೀವಿನಿ ಒಕ್ಕೂಟ, ವಿವಿಧ ಸಂಘಗಳ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೊದ್ದೂರು ಗ್ರಾಮದ ರಸ್ತೆಯಂಚಿನಲ್ಲಿ ಹರಿಯುವ ಕಾವೇರಿ ನದಿ ಮಲೀನವಾಗುತ್ತಿದ್ದು, ಪ್ರವಾಸಿಗರು, ಜನರು ಕಸ ತ್ಯಾಜ್ಯಗಳನ್ನು ಕಾವೇರಿ ನದಿ ತಟದಲ್ಲಿ ಸುರಿಯುತ್ತಿದ್ದು ಸ್ವಚ್ಛತೆ ಇಲ್ಲದಾಗಿದೆ. ಈ ಹಿಂದೆ ಕಾವೇರಿ ಹೊಳೆ, ರಸ್ತೆಯ ಎರಡು ಬದಿ ಸುಂದರವಾಗಿ ಕಾಣುತ್ತಿತ್ತು. ನಿರ್ಮಲವಾಗಿತ್ತು. ಈಗ ತ್ಯಾಜ್ಯಗಳು ತುಂಬಿ ಮಲೀನವಾಗಿದೆ. ಇಂತಹ ನದಿಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು. ತ್ಯಾಜ್ಯವನ್ನು ಎಸೆಯುವುದರಿಂದ ನೀರು ಮಲೀನವಾಗುತ್ತಿದೆ. ಇದೀಗ ಕಾವೇರಿ ಸಂಕ್ರಮಣ, ದಸರಾ ಹಬ್ಬಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದಾಗ ಸುಂದರವಾಗಿ ಇರಬೇಕಾದರೆ ಎಲ್ಲರ ಜವಾಬ್ದಾರಿ ಇದೆ. ಲೋಕೋಪ ಯೋಗಿ ಇಲಾಖೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ನಾವೇ ಈ ಕಾರ್ಯಕ್ಕೆ ಮುಂದಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಪಂಚಾಯಿತಿ ಸಿಇಓ ಶೇಖರ್ ಮಾತನಾಡಿ, ಸ್ವಚ್ಛತಾ ಸೇವಾ ಯೋಜನೆಯಡಿ ಕನ್ನಡ ನಾಡಿನ ಜೀವನದಿ ಕಾವೇರಿಯ ಸಂರಕ್ಷಣೆ ಮಾಡುವಂತಹ ಉದ್ದೇಶವನ್ನು ಹೊಂದಿದೆ. ಪ್ರಜ್ಞಾವಂತ ನಾಗರಿಕರು ಕಾವೇರಿ ನದಿ ಮಲೀನವಾಗದಂತೆ ನೋಡಿಕೊಳ್ಳಬೇಕು. ನದಿ ಮೂಲದಲ್ಲಿ ತ್ಯಾಜ್ಯ ಎಸೆಯಬಾರದು. ಸ್ವಚ್ಛ ಪರಿಸರವನ್ನು ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದವಾಡ ಗ್ರಾಮದ ಕಾವೇರಿ ನದಿ ತೀರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಕೊಟ್ಟಮುಡಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಭಾಗಿ ತ್ವದಲ್ಲಿ ನಾಪೋಕ್ಲು ಕೊಟ್ಟಮುಡಿ ಸೇತುವೆಯಿಂದ ಹೊದ್ದೂರು ಗ್ರಾಮ ಪಂಚಾಯಿತಿವರೆಗೆ ಕಾವೇರಿ ನದಿಯ ಪರಿಸರ ಹಾಗೂ ರಸ್ತೆಯುದ್ಧಕ್ಕೂ ಸ್ವಚ್ಛತಾ ಕಾರ್ಯ ಪ್ರಾರಂಭ ಮಾಡಲಾಯಿತು, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಮೊಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವಾಂಚಿರ ಅಜಯ್ ಕುಮಾರ್, ಸರಸು, ಕುಸುಮಾವತಿ, ಚೌರೀರ ಅನಿತಾ, ಚೌರೀರ ನವೀನ್, ಕೆ.ಆರ್. ಅನಿತಾ, ಮೈದು ಕೊಟ್ಟಮುಡಿ, ಪಾರ್ವತಿ, ಲಕ್ಷಿö್ಮ, ಕಡ್ಲೆರ ಟೈನಿ, ಪಿಡಿಓ ಅಬ್ದುಲ್ಲಾ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಪಾಟೀಲ್ ಹಾಗೂ ಗ್ರಾಮದ ಮಹಿಳಾ ಒಕ್ಕೂಟ ಹಾಗೂ ಯುವಕ ಸಂಘಗಳ ಪದಾಧಿಕಾರಿ, ಪ್ರತಿನಿಧಿಗಳು ಹಾಜರಿದ್ದರು.