‘ದೇಶ ಸುತ್ತಿ ನೋಡು - ಕೋಶ ಓದಿ ನೋಡು’ ಎಂಬ ನಾಣ್ನುಡಿ ಪ್ರಚಲಿತದಲ್ಲಿದೆ. ವಿಭಿನ್ನ ಪ್ರದೇಶಗಳನ್ನು ನೋಡುವುದರಿಂದ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ ಎಂದು ತಜ್ಞರೂ ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ವಿನೂತನ ಸಾಹಸಕ್ಕೆ ಮುಂದಾಗಿದ್ದಾರೆ. ಸೈಕಲ್ ಮೂಲಕ ದೇಶ ಪರ್ಯಟನೆ ಮಾಡುತ್ತ ಹೊಸ ಅನುಭವ ಪಡೆಯುತ್ತ ಮುನ್ನುಗುತ್ತಿದ್ದು, ಇದೀಗ ಮಡಿಕೇರಿ ಮೂಲಕ ಮತ್ತೊಂದು ಸುತ್ತು ಸುತ್ತಾಟಕ್ಕೆ ಕೈಹಾಕಿದ್ದಾರೆ.

ಮೂಲತಃ ಕೊಯಮೊತ್ತೂರಿನ ನಿವಾಸಿ, ಮುತ್ತು ಸೆಲ್ವಂ ಎಂಬ ಯುವಕ ಸೈಕಲಿಂಗ್ ಮೂಲಕ ದೇಶ ನೋಡುತ್ತಿರುವ ಯುವಕ. ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಈತ ಪುನೀತ್ ಸ್ಮರಣೆಗಾಗಿ ಅವರ ಭಾವಚಿತ್ರವಿರುವ ಉಡುಪು ಧರಿಸಿ ೨೧.೧೨.೨೦೨೧ ಅವರ ಸೇವೆ ಹಾಗೂ ಆದರ್ಶವನ್ನು ಜನರಿಗೆ ಪರಿಚಯಿಸುವ ಜೊತೆಗೆ ದೇಶ ಉಳಿಸಿ, ನದಿಗಳನ್ನು ಉಳಿಸಿ, ಜನರು ಒಂದಾಗಿ ಎಂಬ ಸಂದೇಶ ನೀಡುತ್ತ ಈ ಕಾರ್ಯ ಕೈಗೊಂಡಿದ್ದಾರೆ.

೧೨೨ ಕೆ.ಜಿ. ತೂಕದ ಸೈಕಲ್‌ನಲ್ಲಿ ಸವಾರಿ ಹೊರಟಿರುವ ಮುತ್ತು ಸೆಲ್ವಂ ತಮಿಳುನಾಡಿನಿಂದ ಆರಂಭಮಾಡಿ ಲಡಾಕ್‌ಗೆ ತೆರಳಿ ಜಮ್ಮುಕಾಶ್ಮೀರ, ಮಧ್ಯಪ್ರದೇಶದಿಂದ ಗೋವಾಕ್ಕೆ ಬಂದು ಇದೀಗ ಪಾಂಡೀಚೇರಿಯಿAದ, ನೇಪಾಳ, ನಾಗಲ್ಯಾಂಡ್‌ನಿAದ ದೆಹಲಿಗೆ ತೆರಳಿ ಯಾತ್ರೆ ಅಂತಿಮಗೊಳಿಸಲಿದ್ದಾರೆ. ೨ ವರ್ಷಗಳನ್ನು ಸೈಕಲಿಂಗ್‌ನಲ್ಲಿ ೧೩ ಸಾವಿರ ಕಿಲೋ ಮೀಟರ್ ಕ್ರಮಿಸಿದ್ದು, ಇನ್ನೂ ಒಂದು ವರ್ಷಗಳ ಕಾಲ ಸುತಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಸಂದೇಶ ನೀಡುವುದರೊಂದಿಗೆ ಗಿನ್ನಿಸ್ ದಾಖಲೆ ಮಾಡಲು ಮುತ್ತು ಸೆಲ್ವಂ ಮುಂದಾಗಿದ್ದಾರೆ. ತೆರಳುವ ಪ್ರದೇಶಗಳ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳೊಂದಿಗೆ ಪತ್ರ ಪಡೆದು ಸಂಸ್ಥೆಗೆ ಸಲ್ಲಿಸಿ ದಾಖಲೆ ಬರೆಯುವ ಹಂಬಲವನ್ನು ಇವರು ಹೊಂದಿದ್ದಾರೆ.

ಇನ್ನೂ ೪೯೦ ದಿನಗಳು ಸೈಕಲಿಂಗ್ ಮಾಡುವ ಚಿಂತನೆ ಹೊಂದಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಟೆಂಟ್ ಹಾಕಿ ವಿಶ್ರಮಿಸುತ್ತೇನೆ. ಜನರ ನೆರವಿನಿಂದ ಊಟ ಮಾಡುತ್ತಿದ್ದೇನೆ ಎಂದು ಮುತ್ತು ಸೆಲ್ವಂ ಹೇಳಿಕೊಂಡಿದ್ದಾರೆ. ಗೋವಾ ಮುಗಿಸಿ ಪಾಂಡಿಚೇರಿಗೆ ತೆರಳುವ ಮಧ್ಯೆ ಇವರು ಮಡಿಕೇರಿಗೆ ಬಂದ ಸಂದರ್ಭ ಜಿಲ್ಲಾಡಳಿತದೊಂದಿಗೆ ಪತ್ರ ಬರೆಸಿಕೊಂಡು ಮುನ್ನುಗುತ್ತಿದ್ದಾರೆ. ಇವರ ಈ ಯಾತ್ರೆ ಯಶಸ್ವಿಯಾಗಿ ದಾಖಲೆ ಬರೆಯುವಂತಾಗಲಿ..

- ಸಿದ್ದರಾಜು ಬೆಳ್ಳಯ್ಯ, ಪ್ರಾಂಶುಪಾಲರು, ಮದೆಮಹದೇಶ್ವರ ಪದವಿಪೂರ್ವ ಕಾಲೇಜು, ಮದೆ.