ಮಡಿಕೇರಿ, ಅ. ೧೦ : ಮಡಿಕೇರಿ ನಗರ ದಸರಾ ಸಮಿತಿಯು ಕಳೆದ ತಿಂಗಳು ಸಾಂಪ್ರದಾಯಿಕವಾಗಿ ಗಣಪತಿ ಪೂಜೆ ನಡೆಸಿ ನಗರಸಭೆಯ ಸಂಕೀರ್ಣದಲ್ಲಿ ಪ್ರಾರಂಭಿಸಿದ್ದ ಸಮಿತಿಯ ಕಚೇರಿಯನ್ನೇ ಈಗ ಮುಚ್ಚಲಾಗಿದೆ. ನಗರ ದಸರಾ ಸಮಿತಿ ಕಚೇರಿಯಲ್ಲಿ ಯಾವುದೇ ಉಪಸಮಿತಿಗಳು ಸಭೆ ನಡೆಸಬಾರದೆಂದು ದಸರಾ ಸಮಿತಿಯು ಸೂಚನೆ ನೀಡಿದೆ. ಕೇವಲ ದಸರಾ ಸಮಿತಿಗೆ ಸೇರಿದ ಸದಸ್ಯರು ಮಾತ್ರ ಕಚೇರಿಯನ್ನು ಬಳಸಿಕೊಳ್ಳತಕ್ಕದ್ದು ಎಂದೂ ಸೂಚನೆಯಲ್ಲಿ ತಿಳಿಸಲಾಗಿದೆ.
ಈ ಕಚೇರಿಯಲ್ಲಿ ದಸರಾ ಸಂಬAಧಿತವಾಗಿ ಸಾಂಸ್ಕೃತಿಕ ಸಮಿತಿ, ಕವಿಗೋಷ್ಠಿ ಸಮಿತಿ, ಯುವ ದಸರಾ ಸಮಿತಿ, ಮಹಿಳಾ ದಸರಾ ಸಮಿತಿಯ ಸದಸ್ಯರು ಕಳೆದ ೧೦ ದಿನಗಳಿಂದ ಸಭೆ ನಡೆಸಿಕೊಂಡು ಬಂದಿದ್ದರು.
ಆದರೆ ಸೋಮವಾರ ಸಂಜೆ ನಡೆದ ಬೆಳವಣಿಗೆಯೊಂದು ಇದೀಗ ಈ ಕಚೇರಿಯಲ್ಲಿ ಸಭೆ ನಡೆಸಬಾರದು ಎಂಬ ಸೂಚನೆಗೆ ಕಾರಣವಾಗಿದೆ.
ಸೋಮವಾರ ಸಂಜೆ ಸಾಂಸ್ಕೃತಿಕ ಸಮಿತಿ ಮತ್ತು ಯುವ ದಸರಾ ಸಮಿತಿ ಸದಸ್ಯರು ದಸರಾ ಸಮಿತಿ ಕಚೇರಿಯಲ್ಲಿ ಸಭೆ ನಡೆಸುತ್ತಾ ಕಾರ್ಯಕ್ರಮದ ರೂಪುರೇಷೆ ನಡೆಸುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಮಹಿಳಾ ದಸರಾ ಸಂಚಾಲಕಿ ಶ್ವೇತಾ ಪ್ರಶಾಂತ್ ಮತ್ತು ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಹಿಳಾ ದಸರಾ ಸಮಿತಿ ಸದಸ್ಯೆಯರಿಗೆ ಸಭೆ ನಡೆಸಲು ಜಾಗ ದೊರಕಿಲ್ಲ ಎಂದು ಅಸಮಧಾನಗೊಂಡರು. ಮಹಿಳಾ ದಸರಾ ಸಂಚಾಲಕಿ ಈ ಸಂದರ್ಭ ಯುವ ದಸರಾ ಮತ್ತು ಸಾಂಸ್ಕೃತಿಕ ಸಮಿತಿಯ ಕೆಲ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಸಾಂಸ್ಕೃತಿಕ ಸಮಿತಿಯಲ್ಲಿದ್ದ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಮತ್ತು ಶ್ವೇತಾ ಪ್ರಶಾಂತ್ ನಡುವೆ ಮಾತು ತಾರಕಕ್ಕೇರಿತು. ಲೀಲಾ ಶೇಷಮ್ಮ ಅವರನ್ನು ಏಕವಚನದಲ್ಲಿ ತೆಗಳಿದ ಘಟನೆಯೂ ಸಂಭವಿಸಿತು.
ಈ ಕಚೇರಿಯನ್ನೇ ಮುಚ್ಚಿಸಿಬಿಡುತ್ತೇನೆ. ಇದು ನಗರಸಭೆಯ ಸದಸ್ಯರಿಗೆ ಮಾತ್ರ ಇರುವ ಸ್ಥಳ, ಇವೆಲ್ಲಾ ನಾನು ಹಾಕಿದ ಕುರ್ಚಿಗಳು ಎಂದೆಲ್ಲಾ ಅಬ್ಬರಿಸಿ ಶ್ವೇತಾ ಪ್ರಶಾಂತ್ ಸ್ಥಳದಿಂದ ತೆರಳಿದರು.
ಮಂಗಳವಾರ ಇದೇ ಸದಸ್ಯೆ ನಗರಸಭೆಯ ಅಧ್ಯಕ್ಷರೊಂದಿಗೆ ವಾದ ನಡೆಸಿ ದಸರಾ ಕಚೇರಿಯನ್ನು ಉಪಸಮಿತಿಗಳಿಗೆ ಬಿಡಬಾರದೆಂದು ಹಠ ಹಿಡಿದರೆಂದು ತಿಳಿದುಬಂದಿದೆ. ಹೀಗಾಗಿಯೇ ದಸರಾ ಸಮಿತಿಯ ಪ್ರಮುಖ ಪದಾಧಿಕಾರಿಗಳ ಆದೇಶದ ಮೇರೆಗೆ ಉಪಸಮಿತಿಗಳು ದಸರಾ ಕಚೇರಿಯಲ್ಲಿ ಸಭೆ ನಡೆಸಬಾರ ದೆಂದು ನಗರಸಭಾ ಸಿಬ್ಬಂದಿ ದೂರವಾಣಿ ಮೂಲಕ ಉಪಸಮಿತಿಗಳ ಪ್ರಮುಖರಿಗೆ ಸಂದೇಶ ನೀಡಿದರು.