ಪೊನ್ನಂಪೇಟೆ, ಅ. ೧೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ೭ನೇ ತರಗತಿ ವಿದ್ಯಾರ್ಥಿಗಳಾದ ಅಮೂಲ್ಯ ಮತ್ತು ಪಿ.ಸಿ. ಅಯ್ಯಪ್ಪ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. ಅಮೂಲ್ಯ ೧೦೦ ಮೀಟರ್ ಹಾಗೂ ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈಕೆ ಜೋಡುಬೀಟಿ ಗ್ರಾಮದ ಅಣ್ಣು ಮತ್ತು ರಾಣಿ ದಂಪತಿ ಪುತ್ರಿ.

ಅಯ್ಯಪ್ಪ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈತ ನಾಲ್ಕೇರಿ ಗ್ರಾಮದ ಮಂಜು ಮತ್ತು ಮುತ್ತು ದಂಪತಿ ಪುತ್ರ. ಇಬ್ಬರೂ ವಿದ್ಯಾರ್ಥಿಗಳ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಲೈನ್‌ಮನೆಗಳಲ್ಲಿ ವಾಸವಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಟಿ.ಎಸ್. ಮಹೇಶ್ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಶಿಕ್ಷಕರಾದ ಬಿ.ಎಂ. ವಿಜಯ್, ಶಿಕ್ಷಕ ವೃಂದ, ಎಸ್‌ಡಿಎಂಸಿ ಯವರು ಹರ್ಷ ವ್ಯಕ್ತಪಡಿಸಿದ್ದಾರೆ. ವೇಗದ ಓಟದ ಮೂಲಕ ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿರುವ ಸರ್ಕಾರಿ ಶಾಲೆಯ ಈ ಇಬ್ಬರು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ, ಸಮವಸ್ತç, ಉತ್ತಮ ಗುಣಮಟ್ಟದ ಪಾದರಕ್ಷೆಯ ಅವಶ್ಯಕತೆ ಇದೆ.