ಮಡಿಕೇರಿ, ಅ. ೧೦: ರೋಟರಿ ಸಂಸ್ಥೆ ವತಿಯಿಂದ "ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್" ಎಂಬ ದ್ಯೇಯ ವಾಕ್ಯದಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಜಿಲ್ಲೆ ೩೧೮೧ರ ಗವರ್ನರ್ ಹೆಚ್.ಆರ್. ಕೇಶವ ತಿಳಿಸಿದ್ದಾರೆ.
ಮಡಿಕೇರಿ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ, ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಪ್ರಪಂಚದಲ್ಲೇ ಅತೀ ದೊಡ್ಡ ಸರ್ಕಾರೇತರ ಸಂಸ್ಥೆಯಾಗಿದ್ದು, ೧೨ ಲಕ್ಷ ಸದಸ್ಯತ್ವವನ್ನ ಹೊಂದಿದೆ. ೧೯೦೫ ರಲ್ಲಿ ಪ್ರಾರಂಭವಾದ ಸಂಸ್ಥೆ ತಮ್ಮ ಸ್ನೇಹಿತರಿಂದ ಆಮಂತ್ರಣ ಪಡೆದು ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ, ಮಡಿಕೇರಿ ರೋಟರಿ ಸಂಸ್ಥೆ ಅಂಗನವಾಡಿಯನ್ನು ಪುನರುಜ್ಜಿವನಗೊಳಿಸಬೇಕು ಎಂಬ ನಿಟ್ಟಿನಲ್ಲಿ ನಗರದ ಏಳು ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಅಲ್ಲದೆ ಉತ್ತಮ ಶಿಕ್ಷಕರನ್ನು ಗೌರವಿಸಲಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮುಂದಿರುವ ಗೊಂದಲಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದ ಜೂನಿಯರ್ ಕಾಲೇಜಿಗೆ ೨೨ ಬೆಂಚ್, ಡೆಸ್ಕ್ಗಳನ್ನು ವಿತರಿಸಲಾಗಿದ್ದು, ಪ್ರಸ್ತುತ ೪೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು. ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಹೊಂದಿರುವವರು ಮಾತ್ರ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ. ಶರತ್, ಸಹಾಯಕ ಗವರ್ನರ್ ಡಿ.ಎಂ. ತಿಲಕ್, ರೋಟರಿ ಝೋನಲ್ ಲೆಫ್ಟಿನೆಂಟ್ ಎಸ್.ಎಸ್. ಸಂಪತ್ ಕುಮಾರ್ ಉಪಸ್ಥಿತರಿದ್ದರು.