ಮಡಿಕೇರಿ, ಅ. ೧೦: ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಕೊಡಗು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆ ಹೊಂದಿದ ಬಳಿಕ ಉಪನ್ಯಾಸಕರ ಕೊರತೆ, ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದಲೇ ತರಗತಿಗಳಿಗೆ ತೆರಳದೆ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಪ್ರತಿಭಟನೆ ಆರಂಭಿಸಿ ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಆಗಮಿಸುವಂತೆ ಪಟ್ಟುಹಿಡಿದರು. ಘೋಷಣೆ ಕೂಗಿ, ಸಮಸ್ಯೆಗಳ ಕುರಿತ ಫಲಕ ಹಿಡಿದು ಅಸಮಾಧಾನ ಹೊರಹಾಕಿದರು.
ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿಭಾಗ ಕೊಡಗು ವಿಶ್ವವಿದ್ಯಾನಿಲಯದೊಂದಿಗೆ ಉಳಿದ ತರಗತಿಗಳು ಮಂಗಳೂರು ವಿವಿಯೊಂದಿಗೆ ಸಂಯೋಜನೆ ಹೊಂದಿರುವ ಪರಿಣಾಮ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಅತಿಥಿ ಉಪನ್ಯಾಸಕರನ್ನು ನೇಮಿಸಿ ಕೊಳ್ಳದೆ ಸಮಸ್ಯೆ ಉಂಟಾಗಿದೆ. ಕೆಲಸ ನಿರ್ವಹಿಸುತ್ತಿದ್ದ ಬೋಧಕೇತರ ಸಿಬ್ಬಂದಿಗಳನ್ನು ತೆಗೆದು ಹಾಕಿರುವ ಕ್ರಮ ಸೇರಿದಂತೆ ಕಾಲೇಜಿನ ಅಭಿವೃದ್ಧಿಗೆ ಪೂರಕ ಸ್ಪಂದನ ದೊರೆಯುತ್ತಿಲ್ಲ ಎಂಬ ಆರೋಪ ಗಳನ್ನು ವಿದ್ಯಾರ್ಥಿಗಳು ಮಾಡಿದರು.
ವಿದ್ಯಾರ್ಥಿನಿ ಸಂಗೀತಾ ಮಾತನಾಡಿ, ಸಮರ್ಪಕವಾಗಿ ತರಗತಿಗಳು ನಡೆಯುತ್ತಿಲ್ಲ. ಇದಕ್ಕೆ ಉಪನ್ಯಾಸಕರ ಕೊರತೆ ಕಾರಣವಾಗಿದೆ. ಕಷ್ಟಪಟ್ಟು ನಮ್ಮ ಪೋಷಕರು ಶುಲ್ಕ ಪಾವತಿಸಿ ಕಾಲೇಜು ಸೇರಿಸಿದ್ದಾರೆ. ನಾವು ದೂರದ ಊರಿನಿಂದ ಬರುತ್ತಿದ್ದೇವೆ. ಆದರೆ, ದಿನಕ್ಕೆ ೨-೩ ತರಗತಿ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪರೀಕ್ಷೆ ಎದುರಿಸಲು ಭಯವಾಗುತ್ತಿದೆ.
(ಮೊದಲ ಪುಟದಿಂದ) ಜೊತೆಗೆ ಶುಲ್ಕವನ್ನು ಹೆಚ್ಚು ಮಾಡಿರುವುದರಿಂದ ಸಮಸ್ಯೆ ಯಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಪ್ರತಾಪ್ ಮಾತನಾಡಿ, ಗಣನೀಯ ಪ್ರಮಾಣದಲ್ಲಿ ಉಪನ್ಯಾಸಕರ ಕೊರತೆ ಕಾಲೇಜಿನಲ್ಲಿದೆ. ಇದರಿಂದ ಕಲಿಕೆಗೆ ಅಡ್ಡಿಯಾಗಿದೆ. ಕಾಲೇಜು ಕಟ್ಟಡವೂ ಶಿಥಿಲ ಸ್ಥಿತಿಯಲ್ಲಿದೆ. ಪ್ರಶ್ನಿಸಿದರೆ ಸಮರ್ಪಕ ಉತ್ತರ ಸಿಗುವುದಿಲ್ಲ. ಅನುದಾನವಿಲ್ಲ ಎಂದು ಹೇಳುತ್ತಾರೆ. ಕಂಪ್ಯೂಟರ್ ಸೇರಿದಂತೆ ಪ್ರಾಯೋಗಿಕ ಕಲಿಕೆಗೆ ಬೇಕಾದ ಅಗತ್ಯ ಸೌಲಭ್ಯಗಳ ಕೊರತೆಯೂ ಇದೆ. ದಿಢೀರ್ ಆಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಸಿಬ್ಬಂದಿಗಳನ್ನು ತೆಗೆದುಹಾಕಲಾಗಿದೆ. ಈ ಹೊತ್ತಿಗೆ ೨ನೇ ಆಂತರಿಕ ಪರೀಕ್ಷೆ ನಡೆಸಬೇಕಿತ್ತು. ಆದರೆ ಇದುವರೆಗೂ ಮೊದಲ ಪರೀಕ್ಷೆಯೂ ನಡೆದಿಲ್ಲ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಸಿಬ್ಬಂದಿಗಳ ಅಳಲು
ಕಾರ್ಯಪ್ಪ ಕಾಲೇಜಿನಲ್ಲಿ ಕಳೆದ ೨೦-೩೦ ವರ್ಷಗಳಿಂದ ಡಿ ದರ್ಜೆ ಸೇರಿದಂತೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೋಧಕೇತರ ಸಿಬ್ಬಂದಿಗಳನ್ನು ಮಂಗಳೂರು ವಿವಿ ಕೆಲಸದಿಂದ ವಜಾ ಮಾಡಿರುವುದರ ಕುರಿತು ಸಿಬ್ಬಂದಿಗಳು ಅಳಲು ತೋಡಿಕೊಂಡರು.
ಮಾಧ್ಯಮದ ಎದುರು ಮಾತನಾಡಿದ ಸಿಬ್ಬಂದಿಗಳು, ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಆದರೆ, ಕಾಲೇಜು ಕೊಡಗು ವಿವಿಗೆ ಸಂಯೋಜನೆ ಹೊಂದಿದ ಬಳಿಕ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಬಂದಿದೆ. ಈ ಕ್ರಮದಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ನೋವು ಹೇಳಿಕೊಂಡರು.
ಉಪಕುಲಪತಿಗಳ ಭರವಸೆ - ನಿಲ್ಲದ ಪ್ರತಿಭಟನೆ
ಕೊಡಗು ವಿವಿ ಉಪಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಸಮಸ್ಯೆ ಪರಿಹಾರದ ವಾಗ್ದಾನ ನೀಡಿದರಾದರೂ ಲಿಖಿತ ಭರವಸೆ ನೀಡುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟುಹಿಡಿದರು.
೮-೧೦ ದಿನಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸುತ್ತೇವೆ. ಉಳಿದ ಸಮಸ್ಯೆಯ ಕುರಿತು ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮತ್ತೊಂದು ಸುತ್ತಿನಲ್ಲಿ ನಿಯೋಗ ತೆರಳಿ ಸಮಸ್ಯೆಯ ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ. ವಿದ್ಯಾರ್ಥಿಗಳು ತಾಳ್ಮೆಯಿಂದ ವರ್ತಿಸಬೇಕು. ಪಾಠಗಳನ್ನು ಹೊಂದಾಣಿಕೆ ಮಾಡಲು ಕ್ರಮವಹಿಸುತ್ತೇನೆ. ವಜಾಗೊಂಡಿರುವ ಸಿಬ್ಬಂದಿಗಳ ಬಗ್ಗೆಯೂ ಮಾನವೀಯತೆ ಆಧಾರದಲ್ಲಿ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ತಾರ್ಕಿಕ ಅಂತ್ಯ ಆಗುವವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹೋರಾಟ ಮುಂದುವರೆಸಿದರು. ಈ ಸಂದರ್ಭ ಕುಲಸಚಿವ ಡಾ. ಸೀನಪ್ಪ, ಕಾಲೇಜು ಪ್ರಾಂಶುಪಾಲ ಮೇಜರ್ ರಾಘವ್ ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.