ಸಿದ್ದಾಪುರ, ಅ. ೯ : ಸಿದ್ದಾಪುರ ಎಂ.ಜಿ. ರಸ್ತೆಯ ಶ್ರೀ ಮಹಾಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ಅದ್ದೂರಿ ಯಾಗಿ ವಿಸರ್ಜಿಸಲಾಯಿತು. ೧೪ನೇ ವರ್ಷದ ಅದ್ದೂರಿ ಗೌರಿ ಗಣೇಶ ವಿಸರ್ಜನೋತ್ಸವ ಅಂಗವಾಗಿ ವಿವಿಧ ಪೂಜಾ ಕಾರ್ಯಗಳು ನಡೆಯಿತು. ಗೌರಿ ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಸಿದ್ದಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಗೀತ ವಾದ್ಯ ಮೇಳ ಗಳೊಂದಿಗೆ ಮೆರವಣಿಗೆ ನಡೆಸಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಸಿಡಿಮದ್ದು ಪ್ರದರ್ಶನದೊಂದಿಗೆ ಡಿಜೆ ಸಂಗೀತಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.