ಗುಡ್ಡೆಹೊಸೂರು, ಅ. ೯: ಇಲ್ಲಿಗೆ ಸಮೀಪದ ಬೆಟ್ಟಗೇರಿ ವ್ಯಾಪ್ತಿಯಲ್ಲಿ ವಾರದಲ್ಲಿ ಮೂರು ಭಾರಿ ರೈತರ ಭತ್ತದ ಗದ್ದೆ, ಕಾಫಿ ತೋಟ, ಜೋಳದ ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ. ಅಲ್ಲಿನ ನಿವಾಸಿ ಕುಡೆಕ್ಕಲ್ ಯತೀಶ್, ಕೆ.ಕೆ. ತಿಮ್ಮಯ್ಯ, ಐಮುಡಿಯಂಡ ಕುಶಾಲಪ್ಪ (ಪಾಪ) ಮತ್ತಿತರ ರೈತರ ಭತ್ತದ ಗದ್ದೆಯ ಬೆಳೆ ನಾಶಪಡಿಸುತ್ತಿದೆ.

ಆನೆಗಳು ದನಗಳು ಮೇಯುವ ರೀತಿಯಲ್ಲಿ ಭತ್ತದ ಬೆಳೆಯನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಅಲ್ಲದೆ ಈ ವಿಭಾಗದಲ್ಲಿ ಒಂಟಿ ಸಲಗ ರೈತರು ನಿರ್ಮಿಸಿದ ಗೇಟ್ ಮೂಲಕವೆ ತೋಟಗಳಿಗೆ ಗದ್ದೆಗಳಿಗೆ ನುಗ್ಗುತ್ತಿದೆ. ಈ ಕಾರಣದಿಂದ ಈ ಭಾಗದ ರೈತರು ತಮ್ಮ ಮನೆಗಳಿಗೆ, ತೋಟಗಳಲ್ಲಿ ನಿರ್ಮಿಸಿದ ಗೇಟ್‌ಗಳನ್ನು ಬಂದ್ ಮಾಡುತ್ತಿಲ್ಲ.

ಬಸವನಹಳ್ಳಿ, ಅತ್ತೂರು, ಹೊಸಕಾಡು ವಿಭಾಗದಲ್ಲು ಆನೆದಾಳಿ ನಡೆಸಿ ಬೆಳೆ ನಾಶಪಡಿಸುತ್ತಿರುವುದಾಗಿ ಆ ವಿಭಾಗದ ರೈತರು ದೂರಿದ್ದಾರೆ. ಕೆ.ವಿ. ಯತೀಶ್ ಅವರ ಭತ್ತದ ಗದ್ದೆಗೆ ಆಗಮಿಸಿದ ಆನೆಗಳ ಹಿಂಡು ಹಾನಿ ಮಾಡಿದೆ. ಪರಿಹಾರಕ್ಕಾಗಿ ಅರ್ಜಿ ನೀಡುವುದರ ಬದಲು ಆನೆಗಳು ಶಾಶ್ವತವಾಗಿ ಗದ್ದೆ, ತೋಟಗಳಿಗೆ ಬರದಂತೆ ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಈ ವಿಭಾಗದ ರೈತರು ಆಗ್ರಹಿಸಿದ್ದಾರೆ.