ಕಣಿವೆ, ಅ. ೯ : ಬಿರುಕು ಬಿಟ್ಟ ಶಿಥಿಲಗೊಂಡ ಮನೆಗಳು.,ಅರೆ ಬರೆ ವಿದ್ಯುತ್ ಸಂಪರ್ಕ,ಫಲಾನುಭವಿಗಳಿಗೆ ದೊರಕದ ಉಚಿತ ವೈದ್ಯಕೀಯ ನೆರವು..,ಸ್ವಚ್ಛವಿಲ್ಲದ ಚರಂಡಿಗಳು....ಇದು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆನೆಕಾಡು ಮೀಸಲು ಅರಣ್ಯದಂಚಿನ ಬಾಳುಗೋಡು ಎಂಬಲ್ಲಿನ ಗಿರಿಜನ ಕುಟುಂಬಗಳ ಕಥೆ - ವ್ಯಥೆಯಾಗಿದೆ.
ಇಲ್ಲಿ ಸುಮಾರು ೭೫ ಕ್ಕೂ ಹೆಚ್ಚಿನ ಗಿರಿಜನ ಕುಟುಂಬಗಳಿವೆ. ಇಲ್ಲಿನ ಬಹುತೇಕ ಮಂದಿಗೆ ಕಳೆದ ೩೦ ವರ್ಷಗಳ ಹಿಂದೆ ಜಿಲ್ಲಾಡಳಿತ ನಿರ್ಮಿಸಿ ಕೊಟ್ಟಿದ್ದ ಮನೆಗಳ ಪೈಕಿ ಕೆಲವು ಮನೆಗಳ ಗೋಡೆಗಳು ಬಿದ್ದುಹೋಗಿವೆ. ಇನ್ನು ಬಹುತೇಕ ಶಿಥಿಲಗೊಂಡಿವೆ. ಕೆಲವು ಬಿರುಕು ಬಿಟ್ಟಿದ್ದು ಬೀಳಲು ದಿನ ಎಣಿಸುತ್ತಿವೆ. ಆದಾಗ್ಯೂ ಇಲ್ಲಿನ ಶ್ರಮಿಕ ಮಂದಿ ಇದೇ ಹರಕು - ಮುರುಕುಗೊಂಡ ಮನೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಗಿರಿಜನ ಅಭಿವೃದ್ಧಿ ಇಲಾಖೆ ಇದೆಯಾ.....? ಎಂಬ ಪ್ರಶ್ನೆ ಕಾಡುವಂತಾಗಿದೆ.
ಹಾಡಿಯಲ್ಲಿನ ಮಂದಿ ವ್ಯವಸ್ಥಿತವಾದ ಮನೆಗಳಿಲ್ಲದೇ ಸಂಕಷ್ಟದ ಬದುಕನ್ನು ಸಂಚಕಾರದಲ್ಲಿ ಕಳೆಯುತ್ತಿದ್ದರೂ ಕೂಡ ಗಿರಿಜನ ಸಮಗ್ರ ಅಭಿವೃದ್ಧಿಗೆಂದೇ ಸರ್ಕಾರ ತೆರೆದಿರುವ ಗಿರಿಜನ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆಯಲ್ಲಿ ಇದೆಯಾ ಎಂದು ಇಲ್ಲಿನ ಒಂದೆರಡು ಅಕ್ಷರವಂತ ಮಂದಿ ಪ್ರಶ್ನಿಸುತ್ತಿದ್ದಾರೆ.
ಅನೇಕ ಪ್ರಶಸ್ತಿಗಳ ಪುರಸ್ಕೃತ ನಾಗಮ್ಮನಿಗೂ ಮನೆಯಿಲ್ಲ : ಇದೇ ಬಾಳುಗೋಡು ಗಿರಿಜನ ಹಾಡಿಯಲ್ಲಿ ಜಾನಪದ ಅಕಾಡೆಮಿ ಸೇರಿದಂತೆ ವಿವಿಧ ಇಲಾಖೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿರುವ ನಾಟಿ ವೈದ್ಯೆ ನಾಗಮ್ಮ ಎಂಬವರು ವಾಸವಿದ್ದಾರೆ. ಆದರೆ ಇವರಿಗೂ ಕೂಡ ಸೂಕ್ತ ಮನೆಯಿಲ್ಲದ ಕಾರಣ ಬಿರುಕಾಗಿರುವ ಮನೆಯಲ್ಲಿ ತಮ್ಮ ವಯೋವೃದ್ಧಿ ಪತಿ ಬಸವಯ್ಯ ಅವರೊಂದಿಗೆ ವಾಸವಿದ್ದಾರೆ.
ನಾಲ್ಕು ದಶಕಗಳ ಹಿಂದೆ ನಾನು ನನ್ನ ಗಂಡ ಸೇರಿ ಕಟ್ಟಿದ ಮಣ್ಣಿನ ಗೋಡೆ ಇದು. ಯಾವಾಗ ಬೀಳುತ್ತೋ ಗೊತ್ತಿಲ್ಲ. ನನಗೆ ೮ ಮಂದಿ ಮಕ್ಕಳು. ಅವರೆಲ್ಲಾ ಬೇರೆ ಬೇರೆ ಕಡೆ ಕೂಲಿ ಮಾಡಿಕೊಂಡು ಬದುಕುತ್ತಿದ್ದಾರೆ. ನಾನು ಜೀವನೋಪಾಯಕ್ಕೆ ನನ್ನ ಹೆತ್ತವರಿಂದ ಬಳುವಳಿಯಾಗಿ ಬಂದAತಹ ನಾಟಿ ಔಷಧಿಯನ್ನು ನನ್ನ ಬಳಿ ಬರುವವರಿಗೆ ನೀಡುವ ಮೂಲಕ ನನ್ನದೇ ಆದ ಒಂದು ಸಣ್ಣ ಸೇವೆ ಮಾಡುತ್ತಾ ಇದ್ದೇನೆ.
ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಬಹಳಷ್ಟು ಮಂದಿ ಐದಾರು ಬಾರಿ ಸನ್ಮಾನ ಮಾಡಿದ್ದಾರೆ.
(ಮೊದಲ ಪುಟದಿಂದ) ಆದರೆ ಹಿತ್ತಲ ಗಿಡ ಮದ್ದಲ್ಲ ಅಂತಾರಲ್ಲ ಹಾಗೆ, ನನ್ನ ಕಾಯಕ ಜಿಲ್ಲಾಡಳಿತಕ್ಕೂ ಗೊತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗೂ ತಿಳಿಯುತ್ತಿಲ್ಲ. ಹಾಗಾಗಿ ಎಷ್ಟು ಬಾರಿ ಬೇಡಿದರೂ ನನಗೆ ಮನೆ ಕಟ್ಟಿಕೊಡ್ತಿಲ್ಲ ಅಂತಾರೆ ನಾಗಮ್ಮ.
ಹಕ್ಕು ಪತ್ರ ಕೊಟ್ಟರೆ ಸಾಕು
ಅರಣ್ಯದಂಚಿನ ಇಲ್ಲಿ ಗಿರಿಜನರಿಗೆ ಸರ್ಕಾರ ನೀಡಿರುವ ಭೂಮಿಗೆ ಹಕ್ಕುಪತ್ರಗಳನ್ನು ನೀಡದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಹಾಗಾಗಿ ಏನನ್ನೂ ಕೊಡದಿದ್ದರು ಪರವಾಗಿಲ್ಲ. ಹಕ್ಕು ಪತ್ರ ಕೊಟ್ಟರೆ ಸಾಕು ಅಂತಾರೆ ವಯೋವೃದ್ಧ ಬಸವಯ್ಯ.
ಕರೆಂಟು ಇಲ್ಲ ಮನೆನೂ ಇಲ್ಲ
ಇದೇ ಹಾಡಿಯಲ್ಲಿ ವಾಸವಿರುವ ಮಂಜೇಶ ಹಾಗೂ ಮೇಘ ಎಂಬವರಿಗೆ ಮನೆಯಿಲ್ಲದ ಕಾರಣ ಬಿದ್ದು ಹೋಗಿರುವ ಕಿತ್ತುನಿಂತ ಮನೆಯ ಬದಿ ಪ್ಲಾಸ್ಟಿಕ್ ಹೊದಿಕೆ ಕಟ್ಟಿಕೊಂಡು ಎಳೆಯ ಹಸುಳೆಯೊಂದಿಗೆ ನರಕದ ಜೀವನ ಮಾಡುತ್ತಿದ್ದು ನಮಗೆ ವಾಸಕ್ಕೆ ಒಂದು ಮನೆ ಕೊಟ್ಟರೆ ಸಾಕು. ಅಲ್ಲಿವರೆಗೂ ಕಿತ್ತು ಹೋದ ಈ ಸೂರಿಗೆ ಕರೆಂಟ್ ಕೊಟ್ಟರೆ ಸಾಕು. ಇನ್ನು ರೇಷನ್ ಕಾರ್ಡು, ಆಧಾರ್ ಕಾರ್ಡು ಏನೇನೂ ಇಲ್ಲ. ಅದು ಹೇಗೆ ಮಾಡಿಸಬೇಕು ಅಂತಾನು ಗೊತ್ತಿಲ್ಲ.
ನನ್ನ ಗಂಡ ಮಂಜ ಬೈಕ್ನಲ್ಲಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದ ನನ್ನ ಓಲೆಯನ್ನು ೫ ಸಾವಿರಕ್ಕೆ ಮಾರಾಟ ಮಾಡಿ ಚಿಕಿತ್ಸೆ ಮಾಡಿಸಿಕೊಂಡು ಬಂದೆ. ನಮಗೆ ಆರೋಗ್ಯ ಸೇವೇನು ಇಲ್ಲವಲ್ಲ ಹೇಳಿ ಎಂದು ಕಣ್ಣೀರು ಹಾಕಿದರು ಗೃಹಿಣಿ ಮೇಘ. ಇನ್ನು ಇದೇ ಹಾಡಿಯಲ್ಲಿ ಅಶೋಕ ಎಂಬವರ ಪತ್ನಿ ಪಾರ್ವತಿ ಎಂಬವರು ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದು ಇವರಿಗೆ ಗಿರಿಜನ ಇಲಾಖೆಯಿಂದ ಸೂಕ್ತ ಚಿಕಿತ್ಸೆ ನೀಡಿದರೆ ಒಳಿತು ಎಂಬುದು ಇಲ್ಲಿನ ಮಂದಿಯ ಕೋರಿಕೆ.
ಸ್ವಚ್ಛತೆ ಹಾಗೂ ಆರೋಗ್ಯ ಮಾಹಿತಿ ಅಗತ್ಯ
ಇಲ್ಲಿನ ಮಂದಿಗೆ ಅದರಲ್ಲೂ ಹದಿಹರೆಯದ ಹೆಣ್ಣುಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ಸಂಬAಧಿತ ಮಾಹಿತಿ ಅತೀ ಅಗತ್ಯವಿದೆ. ಜಿಲ್ಲೆಯ ಆರೋಗ್ಯ ಇಲಾಖೆ ಪ್ರತಿಯೊಂದು ಹಾಡಿಗಳಲ್ಲೂ ಪ್ರತ್ಯೇಕ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಮುಖ್ಯವಾಹಿನಿಯಿಂದ ಹೊರ ಉಳಿದಿರುವ ಈ ಅಮಾಯಕ ಹಾಗೂ ನಿರಕ್ಷರಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕಿದೆ.
ಅಂಗನವಾಡಿಯಲ್ಲಿ ಇಲಿ ಕಾಟ
ಬಾಳುಗೋಡು ಹಾಡಿಯಲ್ಲಿ ಅಂಗನವಾಡಿ ಇದ್ದು ಇಲ್ಲಿಗೆ ಸರ್ಕಾರದ ಸೌಲಭ್ಯ ಪಡೆಯಲು ಕೇವಲ ಎರಡೇ ಎರಡು ಮಕ್ಕಳು ಬರುತ್ತಿದ್ದಾರೆ. ಆದರೆ ನಾವೇನು ಕಡಿಮೆ. ನಮಗೂ ಉಚಿತ ಪೌಷ್ಟಿಕಾಂಶಗಳನ್ನು ನೀಡಿ ಎಂದುಕೊAಡೋ ಏನೋ ಇಲಿಗಳು ತಂಡೋಪತAಡವಾಗಿ ಧಾವಿಸಿ ಬಂದು ಆಹಾರ ಪರಿಕರಗಳನ್ನು ತಿನ್ನುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಹೇಳುತ್ತಾರೆ.
ಹಾಡಿಯಲ್ಲಿನ ಅನಕ್ಷರಸ್ಥ ಕುಟುಂಬಗಳ ಗರ್ಭಿಣಿ ಬಾಣಂತಿಯರಿಗೆ ಸರ್ಕಾರ ಉಚಿತವಾಗಿ ನೀಡುವ ಪೌಷ್ಠಿಕಾಂಶಗಳ ಪರಿಕರಗಳನ್ನು ಇಲ್ಲಿನ ಮುಗ್ಧ ದಂಪತಿಗಳಾದ ಮಂಜೇಶ ಹಾಗೂ ಮೇಘ ದಂಪತಿಗಳಿಗೆ ದೊರಕದ ಬಗ್ಗೆ ದೂರಿದ್ದು ತಾಯಿ ಕಾರ್ಡ್ ಮಾಡಿಸದಿದ್ದುದು ಇದಕ್ಕೆ ಕಾರಣವಾಗಿದೆ. ಹಾಗಾಗಿ ನಮಗೂ ಸೌಲಭ್ಯ ಕೊಡಲಿ ಎಂಬುದು ಮೇಘ ಅವರ ಮುಗ್ಧತೆಯ ಕೋರಿಕೆ. ಒಟ್ಟಾರೆ ಸಮಸ್ಯೆಗಳೇ ತುಂಬಿರುವ ಹಾಡಿಗೆ ಜಿಲ್ಲಾ ಅಧಿಕಾರಿಗಳು ಧಾವಿಸಿ ಬಂದು ಸಮಸ್ಯೆ ಆಲಿಸಿದರೆ ಪರಿಹಾರ ದೊರಕುವುದೋ ಏನೋ ಅಂತಾರೆ ಇಲ್ಲಿನ ಅಮಾಯಕ ಮಂದಿ.
- ಕೆ.ಎಸ್. ಮೂರ್ತಿ