ಪಂಚರಾಜ್ಯಗಳಿಗೆ ಚುನಾವಣೆ ಘೋಷಣೆ
ನವದೆಹಲಿ, ಅ. ೯: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್ ೩ರಂದು ಫಲಿತಾಂಶ ಪ್ರಕಟವಾಗಲಿದೆ. ಛತ್ತೀಸ್ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಘೋಷಣೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನಕ್ಸಲ್ ಸಂಘರ್ಷ ಪೀಡಿತ ಛತ್ತೀಸ್ ಘಡದಲ್ಲಿ ಮಾತ್ರ ೨ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಮಿಜೋರಾಂ ನಲ್ಲಿ ನವೆಂಬರ್ ೭ ರಂದು ಮತದಾನ ನಡೆಯಲಿದ್ದು, ಛತ್ತೀಸ್ ಘಡದಲ್ಲಿ ನವೆಂಬರ್ ೭ ಮತ್ತು ೧೭ರಂದು ೨ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದಂತೆ ಮಧ್ಯಪ್ರದೇಶದಲ್ಲಿ ನವೆಂಬರ್ ೧೭ರಂದು, ರಾಜಸ್ಥಾನದಲ್ಲಿ ನವೆಂಬರ್ ೨೩ರಂದು ಮತ್ತು ತೆಲಂಗಾಣದಲ್ಲಿ ನವೆಂಬರ್ ೩೦ರಂದು ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ ೩ರಂದು ಪ್ರಕಟವಾಗಲಿದೆ ಎಂದು ತಿಳಿಸಿದರು.
ಭೀಕರ ಅಪಘಾತ : ೭ ಮಂದಿ ದುರ್ಮರಣ
ವಿಜಯನಗರ, ಅ. ೯: ಎರಡು ಟಿಪ್ಪರ್ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ೭ ಜನ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಭೀಮಲಿಂಗ, ಕೆಂಚವ್ವ, ಉಮಾ, ಭಾಗ್ಯ, ಗೋಣಿಬಸಪ್ಪ, ಅನಿಲ್ ಮತ್ತು ಯುವರಾಜ ಎಂದು ಗುರುತಿಸಲಾಗಿದೆ. ಟಿಪ್ಪರ್ ಆಕ್ಸಲ್ ಕಟ್ ಆಗಿ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇಸ್ರೇಲ್ನಿಂದ ಗಾಜಾ ಮೇಲೆ ಯುದ್ಧ : ೧,೧೦೦ಕ್ಕೂ ಅಧಿಕ ಮಂದಿ ಬಲಿ
ಜೆರುಸಲೇಂ, ಅ. ೯: ಇಸ್ರೇಲ್ ಸೈನಿಕರು ಎನ್ಕ್ಲೇವ್ನ ಹಮಾಸ್ ಆಡಳಿತಗಾರರ "ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯಗಳನ್ನು" ನಾಶಮಾಡುವುದಾಗಿ ಯುದ್ಧ ಘೋಷಿಸಿದ ನಂತರ ಸೋಮವಾರ ಗಾಜಾ ಪಟ್ಟಿಯ ಮೇಲೆ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ದಕ್ಷಿಣ ಇಸ್ರೇಲ್ನ ಪ್ರದೇಶಗಳಿಂದ ಗಾಜಾ ಬಂದೂಕುಧಾರಿಗಳನ್ನು ಹೊರಹಾಕಲು ಇಸ್ರೇಲಿ ಸೈನಿಕರು ಯುದ್ಧ ತೀವ್ರಗೊಳಿಸಿದ್ದಾರೆ. ಇಸ್ರೇಲ್ನಲ್ಲಿ ಕನಿಷ್ಠ ೭೦೦ ಜನರು, ಗಾಜಾದಲ್ಲಿ ೪೦೦ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪುಗಳು ಇಸ್ರೇಲಿ ಕಡೆಯಿಂದ ೧೩೦ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ. ಹಮಾಸ್ ಗಾಜಾದಿಂದ ಬೃಹತ್ ಆಕ್ರಮಣ ಪ್ರಾರಂಭಿಸಿದ ಎರಡು ದಿನಗಳ ನಂತರ, ಇಸ್ರೇಲಿ ಪಡೆಗಳು ಇನ್ನೂ ಹಲವಾರು ಸ್ಥಳಗಳಲ್ಲಿ ಅಡಗಿರುವ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿವೆ. ಇಂದು ದಕ್ಷಿಣ ಇಸ್ರೇಲ್ನಲ್ಲಿ "ಏಳರಿಂದ ಎಂಟು" ಸ್ಥಳಗಳಲ್ಲಿ ಹಮಾಸ್ ವಿರುದ್ಧ ಹೋರಾಡುತ್ತಿದೆ ಎಂದು ಮಿಲಿಟರಿ ಹೇಳಿದೆ.
ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ೯ ಮಂದಿ ಸಾವು
ಚೆನ್ನೈ, ಅ. ೯: ತಮಿಳುನಾಡಿನ ಅರಿಯಲೂರು ಜಿಲ್ಲೆಯ ವಿರಾಗಲೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ೯ಮಂದಿ ಮೃತಪಟ್ಟು ಐವರು ಗಂಭೀರ ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಕ್ಷಣಾರ್ಧದಲ್ಲಿ ಪಟಾಕಿ ತಯಾರಿಕಾ ಘಟಕ ಸುಟ್ಟು ಕರಕಲಾಗಿದೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಒಟ್ಟು ೯ ಮಂದಿ ಜೀವ ಕಳೆದುಕೊಂಡಿದ್ದಾರೆ. ಪಟಾಕಿ ತಯಾರಿಕಾ ಘಟಕದಲ್ಲಿ ಸುಮಾರು ೩೦ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಅರಿಯಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಟ್ಟಿತು. ಘಟಕದ ಸಮೀಪ ಹೋಗಲು ಆಗದಷ್ಟು ಬೆಂಕಿ ತೀವ್ರತೆ ಇತ್ತು. ಜತೆಗೆ ಪಟಾಕಿ ಸಿಡಿತದಿಂದ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಇನ್ನು ಈ ಅವಘಡಲ್ಲಿ ೮ಕ್ಕೂ ಹೆಚ್ಚು ಬೈಕ್ಗಳಿಗೆ ಹಾನಿಯಾಗಿವೆ. ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒಂಬತ್ತು ಜನರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ೩ ಲಕ್ಷ ರೂ. ಗಂಭೀರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ.ಸರಳವಾಗಿ ಗಾಯಗೊಂಡವರಿಗೆ ೫೦,೦೦೦ ರೂ.ಗಳ ಪರಿಹಾರ ಘೋಷಿಸಿದ್ದಾರೆ.