ಅತ್ತಿಬೆಲೆ ಪಟಾಕಿ ಗೋದಾಮು ದುರಂತ; ತನಿಖೆಯನ್ನು ಸಿಐಡಿಗೆ ವಹಿಸಿದ ಸರ್ಕಾರ

ಬೆಂಗಳೂರು, ಅ. ೮: ಆನೇಕಲ್ ಪಟ್ಟಣದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ೧೪ ಮಂದಿ ಸಾವಿಗೀಡಾದ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಆದೇಶಿಸಿದ್ದಾರೆ. ಇದೀಗ ಪೊಲೀಸರ ವಶದಲ್ಲಿರುವ ಅಂಗಡಿ ಮಾಲೀಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮುಖ್ಯಮಂತ್ರಿ ಹೇಳಿದರು. ನಿಖರವಾಗಿ ಏನಾಯಿತು ಎಂದು ನಮಗೆ ತಿಳಿದಿಲ್ಲ. ಆದರೆ, ಗೋದಾಮಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ ಪರವಾನಗಿಯನ್ನು ನವೀಕರಿಸಲಾಗಿದೆ. ಅಂಗಡಿಯಲ್ಲಿ ಯಾವುದೇ ಅಗ್ನಿಶಾಮಕ ಸಾಧನ ಕಂಡುಬAದಿಲ್ಲ. ಇದು ಅಂಗಡಿ ಮಾಲೀಕನ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಹಾಗಾಗಿ ಘಟನೆಯ ತನಿಖೆಯನ್ನು ಸಿಐಡಿಗೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ಮೃತರ ಪೈಕಿ ಇನ್ನೂ ಕೆಲವು ಶವಗಳ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ೧೪ ಮಂದಿ ಸಾವಿಗೀಡಾಗಿದ್ದಾರೆ ಮತ್ತು ಮೃತರೆಲ್ಲರೂ ತಮಿಳುನಾಡಿನವರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಅವರು ತಮ್ಮ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಹಮಾಸ್ ಉಗ್ರರ ದಾಳಿ: ಸಾವಿನ ಸಂಖ್ಯೆ ೪೦೦ಕ್ಕೆ ಏರಿಕೆ

ಟೆಲ್‌ಅವಿವ್(ಇಸ್ರೇಲ್), ಅ. ೮: ಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ೪೦೦ಕ್ಕೆ ಏರಿಕೆಯಾಗಿದೆ ಮತ್ತು ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಇಸ್ರೇಲ್‌ನ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ. ಉಗ್ರರ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ ೪೦೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು ೨,೦೪೮ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆ ಮಾಧ್ಯಮ ವರದಿ ಮಾಡಿದೆ. ಹಮಾಸ್ ರಾಕೆಟ್ ದಾಳಿ ಪ್ರಾರಂಭಿಸಿದ ೨೪ ಗಂಟೆಗಳ ನಂತರ, ಗಾಜಾ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ೩೨೦ ಮಂದಿ ಸಾವು

ನವದೆಹಲಿ, ಅ. ೮: ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಶನಿವಾರ ಹಲವು ಭಾರಿ ಭೂಮಿ ಕಂಪಿಸಿದ್ದು, ಕನಿಷ್ಟ ೩೨೦ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಲ್ಲಿ ೭೮ ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲಿಗೆ ರಿಕ್ಟರ್ ಮಾಪಕದಲ್ಲಿ ೬.೩ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಆನಂತರ ೫.೫, ೪.೭ ಮತ್ತು ೫.೯ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ವಾಯವ್ಯ ನಗರ ಹೆರಾತ್‌ನಲ್ಲಿ ಭೂಕಂಪನ ಕೇಂದ್ರಬಿAದು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ಜಿಂದಾ ಜಾನ್ ಮತ್ತು ಘೋರಿಯನ್ ಜಿಲ್ಲೆಗಳ ೧೨ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಸಾವಿರಾರು ಜನ ಮನೆಯಿಂದ ಹೊರಗೆ ಬಂದರು. ರಸ್ತೆಗಳ ಮೇಲೆಯೇ ಇಡೀ ದಿನ ಕಳೆದ ಜನ ಅನ್ನ-ನೀರಿಲ್ಲದೆ ಪರದಾಡಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಪ್ರಬಲ ಭೂಕಂಪದಿAದಾಗಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಆಯಾ ನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ನೂರಾರು ಮಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪ್ರವಾಸಕ್ಕೆಂದು ತೆರಳಿದ್ದ ನಟಿ ಸರಳಾ ಕುಮಾರಿ ನಾಪತ್ತೆ

ಹೈದರಾಬಾದ್, ಅ. ೮: ಮೇಘ ಸ್ಫೋಟದಿಂದ ಸಿಕ್ಕಿಂನಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಟಾಲಿವುಡ್‌ನ ಹಿರಿಯ ನಟಿ ಸರಳಾ ಕುಮಾರಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಸೇನಾ ಸಿಬ್ಬಂದಿ ಸೇರಿದಂತೆ ೪೦ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿರುವ ಅವರ ಮಗಳು ನಬಿತಾ ಅವರು ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ನಾಪತ್ತೆಯಾಗಿರುವ ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನೆಲೆಸಿದ್ದ ನಟಿ ಇತ್ತೀಚೆಗೆ ಸಿಕ್ಕಿಂಗೆ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಬಗ್ಗೆ ಮಗಳಿಗೆ ಮೊದಲೇ ತಿಳಿಸಿದ್ದರು. ಮೂಲಗಳ ಪ್ರಕಾರ, ಅಕ್ಟೋಬರ್ ೩ ರಂದು ಅವರೊಂದಿಗೆ ಕೊನೆಯ ಸಂಭಾಷಣೆಯ ನಂತರ ಸರಳಾ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ೧೯೮೩ರಲ್ಲಿ ಮಿಸ್ ಆಂಧ್ರಪ್ರದೇಶ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಚಿತ್ರರಂಗ ಪ್ರವೇಶಿಸಿದ ಸರಳಾ ಕುಮಾರಿ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.

ಸಚಿವ ಯುಮ್ನಮ್ ಖೇಮ್‌ಚಂದ್ ನಿವಾಸದಲ್ಲಿ ಗ್ರೆನೇಡ್ ಸ್ಫೋಟ

ಗುವಾಹಟಿ, ಅ. ೮: ಮಣಿಪುರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಯುಮ್ನಮ್ ಖೇಮ್‌ಚಂದ್ ಅವರ ಇಂಫಾಲ್‌ನ ಯುಮ್ನಾಮ್ ಲೈಕೈಯಲ್ಲಿರುವ ನಿವಾಸದಲ್ಲಿ ದುಷ್ಕರ್ಮಿಗಳು ಶನಿವಾರ ರಾತ್ರಿ ಗ್ರೆನೇಡ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಸಚಿವರು ಮತ್ತು ಅವರ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದು, ಮನೆಯ ಕಾವಲು ಕಾಯುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಘಟನೆ ಬಳಿಕ ಆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮ ನಿವಾಸದ ಗೇಟ್ ಬಳಿ ಗ್ರೆನೇಡ್ ಸ್ಫೋಟಗೊಂಡಾಗ ಕುಟುಂಬ ಸದಸ್ಯರೊಂದಿಗೆ ತಾನು ಮನೆಯಲ್ಲಿದ್ದೆ. ಯೋಧನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಖೇಮಚಂದ್ ಭಾನುವಾರ ತಿಳಿಸಿದ್ದಾರೆ.

ತಾಯಿಗೆ ವಿಷ ಬೆರೆಸಿದ ಚಹಾ ಕುಡಿಸಿದ ಬಾಲಕಿ!

ರಾಯಬರೇಲಿ, ಅ. ೮: ಉತ್ತರ ಪ್ರದೇಶದ ರಾಯ ಬರೇಲಿಯಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗದಂತೆ ತಡೆದಿದ್ದಕ್ಕೆ ೧೬ ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಗೆ ವಿಷವಿಕ್ಕಿರುವ ಆಘಾತಕಾರಿ ಘಟನೆ ನಡೆದಿದೆ. ವಿಷ ಬೆರೆಸಿದ ಚಹಾ ಸೇವಿಸಿ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಬಾಲಕಿ ಆತಂಕಗೊAಡು ನೆರೆಹೊರೆಯವರ ಸಹಾಯ ಕೇಳಿದ್ದಾಳೆ. ತಾಯಿ ಸಂಗೀತಾ ಯಾದವ್ (೪೮) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅವರು ಅಪಾಯದಿಂದ ಪಾರಾಗಿದ್ದಾರೆ. ರಾಯ್‌ಬರೇಲಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಲೋಕ್ ಪ್ರಿಯದರ್ಶಿನಿ ಮಾತನಾಡಿ, ಬಾಲಕಿ ಮತ್ತು ಆಕೆಯ ಗೆಳೆಯನ ವಿರುದ್ಧ ಐಪಿಸಿ ಸೆಕ್ಷನ್ ೩೨೮ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಬಾಲಕಿ ತನ್ನ ಗೆಳೆಯ ಹಿಮಾಂಶು ಕುಮಾರ್ (೧೮)ನನ್ನು ಮಾರುಕಟ್ಟೆಯಿಂದ ವಿಷ ತರುವಂತೆ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ವಿಚಾರಣೆ ನಡೆಸಲಾಗುತ್ತಿದ್ದು, ಹಿಮಾಂಶು ತಲೆಮರೆಸಿಕೊಂಡಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.