ಕಣಿವೆ, ಅ. ೬: ಈ ಬಾರಿ ಸೇವಂತಿಗೆ ಹೂವು ಬೆಳೆದ ಕೃಷಿಕರು ಬೆಳೆದ ಹೂವಿಗೆ ಸೂಕ್ತ ರೀತಿಯಲ್ಲಿ ದರ ಸಿಗದ ಕಾರಣ ಕಂಗಾಲಾಗಿದ್ದಾರೆ.
ಕಳೆದ ವರ್ಷದ ಈ ದಿನಗಳಲ್ಲಿ ಒಂದು ಮಾರು ಹೂವಿಗೆ ರೂ. ೮೦ ರಿಂದ ೧೦೦ ಇದ್ದದ್ದು ಈ ಬಾರಿ ಕೇವಲ ರೂ. ೨೦ ಗೆ ಗಣನೀಯವಾಗಿ ಕುಸಿದಿದೆ.
ಕೊಡಗು ಜಿಲ್ಲೆಯ ಗಡಿ ಭಾಗ ಕುಶಾಲನಗರ ತಾಲೂಕಿನ ಶಿರಂಗಾಲದ ರತ್ನಮ್ಮ ಎಂಬ ರೈತ ಮಹಿಳೆ ಕಳೆದ ಹಲವು ವರ್ಷ ಗಳಿಂದ ನಿರಂತರ ವಾಗಿ ಸೇವಂತಿಗೆ ಹೂವಿನ ಕೃಷಿ ಮಾಡುತ್ತಿದ್ದು ಇದರಿಂದ ಬಂದ ಸಂಪಾದನೆಯಿAದಲೇ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಶಿಕ್ಷಣ ಕೊಡಿಸಿದ್ದಾರೆ. ಜೊತೆಗೆ ಓರ್ವ ಪುತ್ರಿಯ ವಿವಾಹ ಮಾಡಿದ್ದಾರೆ. ಮತ್ತೋರ್ವ ಪುತ್ರಿಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ.
ಆದರೆ ಈ ಬಾರಿ ಸೇವಂತಿಗೆ ಹೂವಿನ ದರ ಇಳಿಕೆ ಮುಂದೇನು ಎಂಬ ಆತಂಕವನ್ನು ತಂದೊಡ್ಡಿದೆ ಎನ್ನುತ್ತಾರೆ ರತ್ನಮ್ಮ. ತಮ್ಮ ಪಾಲಿಗೆ ಸೇರಿದ ಕೇವಲ ೨೦ ಸೆಂಟು ಜಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಲಕ್ಷಾಂತರ ರೂಗಳ ಲಾಭ ಗಳಿಸುತ್ತಿದ್ದವರು ಇದೀಗ ಖರ್ಚು ಮಾಡಿದ ಹಣವೂ ಕೂಡ ಸಿಗದ ಸ್ಥಿತಿಗೆ ಇಂದಿನ ಹೂವಿನ ಬೆಲೆ ಬಂದಿದೆ.
ಬಹಳಷ್ಟು ಮಂದಿ ಈ ವರ್ಷ ಸೇವಂತಿಗೆ ಹೂ ಕೃಷಿಗೆ ಮುಗಿ ಬಿದ್ದ ಪರಿಣಾಮ ದರ ಕುಸಿತಕ್ಕೆ ಕಾರಣವಾಗಿದೆ. ಕಳೆದ ವರ್ಷ ಗಣಪತಿ ಹಾಗೂ ದೀಪಾವಳಿ ಈ ಎರಡು ಹಬ್ಬಗಳಲ್ಲಿ ತಮಗೆ ವರ್ಷದ ಲಾಭ ಸಿಕ್ಕಿತ್ತು. ಆದರೆ ಈ ಬಾರಿ ಬೆಳೆಯಲು ಖರ್ಚು ಮಾಡಿದ ಹಣವೇ ಸಿಕ್ಕಿಲ್ಲ ಅಂತಾರೆ ಕೃಷಿ ಮಹಿಳೆ ರತ್ನಮ್ಮ.