ಶನಿವಾರಸಂತೆ, ಅ. ೬: ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಶೀಘ್ರ ನಿರ್ಗಮನಕ್ಕೆ, ವರ್ಗಾವಣೆಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವೈದ್ಯರ ನಡುವಣ ಉತ್ತಮ ಬಾಂಧವ್ಯದ ಕೊರತೆಯೇ ಕಾರಣವಾಗಿದ್ದು ತಜ್ಞ ವೈದ್ಯರ ಉಳಿವಿಗೆ ಜನಪ್ರತಿನಿಧಿಗಳ ಸಹಕಾರ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ನಿಡ್ತ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಆಯುಷ್ಮಾನ್ ಭವ ಅಭಿಯಾನ-ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆಯ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಕಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಶಿಬಿರ ಆರಂಭದಲ್ಲಿ ಕಾಯಿಲೆಗಳ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂಬ ಸದುದ್ದೇಶದಿಂದ ಆರೋಗ್ಯ ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ೨೫ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ ಎಂದರು.

ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯ ಡಾ. ನಂಜುAಡಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ದೊರೆಯಬೇಕು ಎಂಬ ಉದ್ದೇಶದಿಂದ ಸಮುದಾಯ ಮಟ್ಟದಲ್ಲಿ ಪ್ರತಿವಾರ ಉಚಿತ ಆರೋಗ್ಯ ತಪಾಸಣೆ ಮಾಡಿ ನಂತರ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯ ಭಾಗ್ಯ ಯೋಜನೆಯಡಿ ಅಂಗವಿಕಲರ ನೋಂದಣಿ ಮಾಡಿ, ಅಂಗದಾನಕ್ಕೆ ಉತ್ತೇಜನ ನೀಡಬೇಕು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬದಲಾವಣೆಯಾಗಿದ್ದು ಆಧುನಿಕ ಯಂತ್ರ-ತAತ್ರಜ್ಞಾನದ ಸೌಲಭ್ಯ ಅಳವಡಿಸಲಾಗಿದೆ. ಸಿಟಿ ಸ್ಕಾö್ಯನ್ ಸೌಲಭ್ಯವಿದೆ. ಬಿಪಿಎಲ್ ಕಾರ್ಡ್, ರೇಷನ್ ಕಾರ್ಡ್ ಇದ್ದರೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ, ಶಸ್ತçಚಿಕಿತ್ಸೆ ಉಚಿತವಾಗಿ ದೊರೆಯಲಿದೆ. ಕಡಿಮೆ ತೂಕದ ಮಕ್ಕಳಿಗೆ ಆರೋಗ್ಯ ಕೇಂದ್ರದಲ್ಲಿ ಉಚಿತ ಸೌಲಭ್ಯ ನೀಡಿ ತಪಾಸಣೆ ಗೊಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ಉತ್ತಮ ಸೇವೆ ಲಭ್ಯವಿಲ್ಲ. ಸುಸಜ್ಜಿತ ಕಟ್ಟಡ, ಎಲ್ಲಾ ಸೌಲಭ್ಯಗಳಿರುವ ಕೇಂದ್ರಕ್ಕೆ ಶೀಘ್ರ ತಜ್ಞ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದರು. ಆರೋಗ್ಯ ಮೇಳದ ಶಿಬಿರದಲ್ಲಿ ೧೦ ಮಂದಿ ವಿಶೇಷ ತಜ್ಞರಾದ ಫಿಜಿಶಿಯನ್, ಮಕ್ಕಳ ವೈದ್ಯರು, ಸ್ತಿçÃರೋಗ ತಜ್ಞರು, ಶಸ್ತç ಚಿಕಿತ್ಸಾ ವೈದ್ಯರು, ಕಿವಿ-ಮೂಗು-ಗಂಟಲು-ಕಣ್ಣು- ದಂತ-ಕೀಲು-ಮೂಳೆ-ಚರ್ಮ ರೋಗ ವೈದ್ಯರುಗಳು, ಮಾನಸಿಕ ಆರೋಗ್ಯ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ೫೪೧ ಮಂದಿ ಉಚಿತ ಆರೋಗ್ಯ ತಪಾಸಣೆಗೊಳಗಾಗಿ ಔಷಧಿಗಳನ್ನು ಪಡೆದುಕೊಂಡರು.

ಶಿಬಿರ ಆಯೋಜಕ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಇಂದೂಧರ್, ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಾದ ಡಾ. ಲೋಕೇಶ್, ಡಾ. ಪುರುಷೋತ್ತಮ್, ಡಾ. ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ದಂತ ವೈದ್ಯಾಧಿಕಾರಿ ಡಾ. ಬಿಪಿನ್, ಡಾ. ಕನ್ನಿಕಾ, ಡಾ. ಕಾವೇರಮ್ಮ, ಆರೋಗ್ಯ ಶಿಕ್ಷಣಾಧಿಕಾರಿ ಗಳಾದ ಟಿ.ಕೆ. ಮಂಜುಳಾ, ಶಾಂತಿ, ಸಿಬ್ಬಂದಿ ಶೈಲಜಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸರಸ್ವತಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮದ್, ಸದಸ್ಯರಾದ ಶರತ್ ಶೇಖರ್, ಆದಿತ್ಯ, ಸರೋಜಾ, ಮಧು, ಪಿಡಿಓ ಹರೀಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯಾವತಿ, ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಎಸ್.ಪಿ. ಭಾಗ್ಯಾ, ಸಿ.ಜೆ. ಗಿರೀಶ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು ಉಪಸ್ಥಿತರಿದ್ದರು.

ಆರೋಗ್ಯ ಮೇಳದ ಶಿಬಿರ ಯಶಸ್ವಿಯಾಗಿ ನಡೆಯಲು ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ, ನಯಾರ ಪೆಟ್ರೋಲ್ ಬಂಕ್, ತ್ರಿಭು ವನ್ ಮೆಡಿಕಲ್ಸ್ ಹಾಗೂ ಸಿದ್ಧಗಂಗಾ ಸ್ಟೋರ್ಸ್ ಮಾಲೀಕರು ಊಟೋ ಪಚಾರ, ಔಷಧೋಪಚಾರದ ಸಂಪೂರ್ಣ ಸಹಕಾರ ನೀಡಿದರು.