ಕೂಡಿಗೆ, ಅ. ೫: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಮತ್ತು ಜಿಲ್ಲೆಗೆ ಆಗಮಿಸುವ ರಾಜ್ಯ ಮತ್ತು ಅಂತರರಾಜ್ಯ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಹಾರಂಗಿಯ ಅಣೆಕಟ್ಟೆಯ ಹಿನ್ನೀರಿನಲ್ಲಿ ಸಾಹಸ ಜಲಕ್ರೀಡೆ ಆರಂಭಿಸುವ ಎಲ್ಲಾ ಸಿದ್ಧತೆಗಳು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ವತಿಯಿಂದ ಭರದಿಂದ ಸಾಗುತ್ತಿವೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಸಾಕಾನೆ ಶಿಬಿರವು ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಸಮೀಪದಲ್ಲಿದ್ದು ಜಿಲ್ಲೆಗೆ ಬರುವ ಸಾವಿರಾರು ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರದ ವೀಕ್ಷಣೆಯ ನಂತರ, ಕಾವೇರಿ ನಿಸರ್ಗಧಾಮ, ಸೇರಿದಂತೆ ಹಾರಂಗಿಯ ಅಣೆಕಟ್ಟೆಯ ಸಮೀಪದ ಬೃಂದಾವನ ಉದ್ಯಾನವನ, ಸಂಗೀತ ಕಾರಂಜಿ, ನಂತರ ಹಾರಂಗಿಯಲ್ಲಿ ಹೊಸದಾಗಿ ಆರಂಭಗೊAಡಿರುವ ಸಾಕಾನೆ ಶಿಬಿರಕ್ಕೆ ಭೇಟಿ ನೀಡುತ್ತಾರೆ. ಇದರ ಜೊತೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಪ್ರಥಮವಾಗಿ ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಸಾಹಸ ಜಲಕ್ರೀಡೆಯನ್ನು ಆರಂಭಗೊಳಿಸುವ ಯೋಜನೆಯ ಪೂರಕ ಸಿದ್ಧತೆಗಳು ನಡೆಯುತ್ತಿವೆ.
ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಾಹಸ ಜಲಕ್ರೀಡೆಗೆ ಸಂಬAಧಿಸಿದAತೆ ಇ-ಟೆಂಡರ್ ಪ್ರಕ್ರಿಯೆಗಳು ರಾಜ್ಯಮಟ್ಟದಲ್ಲಿ ನಡೆದು ಬೆಂಗಳೂರಿನ ಜಲಕ್ರೀಡೆಗೆ ಸಂಬAಧಿಸಿದ ಸಾಹಸ ಪರಿಣಿತ ವಿಭಾಗದವರು ಟೆಂಡರ್ ಪಡೆದಿದ್ದಾರೆ.
ರಾಜ್ಯದ ೨೪ ಕಡೆಗಳಲ್ಲಿ ಆರಂಭಿಸುವ ಚಿಂತನೆಯಲ್ಲಿ, ಪ್ರವಾಸೋದ್ಯಮಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ವತಿಯಿಂದ ಕಾರ್ಯ ಯೋಜನೆಗಳು ಸಿದ್ಧಗೊಂಡಿದ್ದು, ಅವುಗಳಲ್ಲಿ ಎರಡು ಕಡೆಗಳಲ್ಲಿ ಮಾತ್ರ ಜಲಕ್ರೀಡೆಯ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಹಾರಂಗಿಯ ಸಾಹಸ ಜಲಕ್ರೀಡೆಯು ಎರಡನೆಯದಾಗಿದೆ. ಸಾಹಸ ಜಲಕ್ರೀಡೆಗೆ ಸಂಬAಧಿಸಿದAತೆ ಪ್ಲಾಟ್ ಫಾರಂ ನಿರ್ಮಾಣ ಸೇರಿದಂತೆ ಅನೇಕ ಚಿಕ್ಕ ಮತ್ತು ದೊಡ್ಡ ಬೋಟ್ಗಳನ್ನು ಹಾರಂಗಿಯ ಹಿನ್ನೀರಿನ ಸ್ಥಳಕ್ಕೆ ತಂದು ಅದಕ್ಕೆ ಸಂಬAಧಿಸಿದAತೆ ಇರುವ ಸಾಹಸಿ ಪರಿಣಿತರ ಪ್ರಕಾರವಾಗಿ ಸುರಕ್ಷಿತ ದೃಷ್ಟಿಯಿಂದ ಎಲ್ಲಾ ಯೋಜನೆ ರೂಪುಗೊಳ್ಳುತ್ತಿದೆ.
ಈಗಾಗಲೇ ಅಂತರರಾಷ್ಟಿçÃಯ ಗುಣಮಟ್ಟದ ಪರಿಣಿತರ ತಂತ್ರಜ್ಞಾನದ ಯೋಜನೆಯ ಅಡಿಯಲ್ಲಿ ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ ಹಿನ್ನೀರಿನಲ್ಲಿ ಚಾಲನೆ ಮಾಡುವ ಪ್ರಾಯೋಗಿಕ ಚಾಲನೆ ನಡೆದಿದ್ದು, ದಸರಾ ಹಬ್ಬದ ಸಂದರ್ಭಕ್ಕೆ ಆರಂಭಿಸುವ ಎಲ್ಲಾ ಕ್ರಮಗಳನ್ನು ಕೈಗೊಳಲಾಗಿದೆ ಎಂದು ಟೆಂಡರ್ದಾರರಾದ ಸಾಹಸ ಜಲಕ್ರೀಡೆಯ ಪರಿಣಿತರಾದ ಸೌಮ್ಯ ಮತ್ತು ಮಂಜುನಾಥ ಮಾಹಿತಿಯನ್ನು ಒದಗಿಸಿದ್ದಾರೆ.
ಹಾರಂಗಿಯ ಅಣೆಕಟ್ಟೆಯ ಹಿನ್ನೀರಿನಲ್ಲಿ ಈಗಾಗಲೇ ಆರಂಭಕ್ಕೆ ಸಿದ್ಧಗೊಂಡಿರುವ ಕೇಂದ್ರದಲ್ಲಿ ರಕ್ಷಣಾ ವ್ಯವಸ್ಥೆ ಮುನ್ನೆಚ್ಚರಿಕೆಯ ಭಾಗವಾಗಿ ಸಾಹಸ ಜಲಕ್ರೀಡೆಯ ಬೋಟ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕುಶಾಲನಗರ ಡಿವೈಎಸ್ಪಿ ಸೇರಿದಂತೆ ಅಧಿಕಾರಿ ವರ್ಗದವರು ಪರಿಶೀಲನೆ ನಡೆಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ