ಸೋಮವಾರಪೇಟೆ, ಅ. ೫: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾ ಸಭೆಯು ಚೌಡ್ಲು ವಿಎಸ್ಎಸ್ಎನ್ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಟಿ. ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಪರಮೇಶ್ ಅವರು, ಸಂಘದ ೧೨೯೮ ಸದಸ್ಯರಿಗೆ ಕೆ.ಸಿ.ಸಿ. ಸಾಲವಾಗಿ ರೂ. ೨೦೨೮ ಕೋಟಿ ವಿತರಿಸಲಾಗಿದೆ. ಸುಸ್ತಿ ಸದಸ್ಯರು ಸಾಲವನ್ನು ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸ ಬೇಕೆಂದು ಮನವಿ ಮಾಡಿದರು.
ಸದಸ್ಯರು ತಮ್ಮ ಕೆ.ಸಿ.ಸಿ. ಸಾಲವನ್ನು ೩೬೫ ದಿನಗಳೊಳಗೆ ಪಾವತಿಸಿ ಸರ್ಕಾರದ ಬಡ್ಡಿ ಸಹಾಯಧನ ಪಡೆದುಕೊಳ್ಳಬೇಕು. ೨೦೨೨-೨೩ನೇ ಸಾಲಿನಲ್ಲಿ ೪೮೦ ಟನ್ ಗೊಬ್ಬರ ಖರೀದಿಸಿದ್ದು, ವ್ಯಾಪಾರ ಲಾಭ ರೂ. ೮.೬೦ ಲಕ್ಷ ಬಂದಿದೆ. ಒಟ್ಟಾರೆ ಲಾಭಾಂಶವು ಪ್ರಸಕ್ತ ವರ್ಷ ರೂ. ೧೯.೫೧ ಲಕ್ಷ ಬಂದಿದ್ದು ಸದಸ್ಯರಿಗೆ ಶೇ. ೪ ರಂತೆ ಡಿವಿಡೆಂಡ್ ವಿತರಿಸಲಾಗುತ್ತದೆ ಎಂದರು.
ಸAಘದಲ್ಲಿ ಪಾಲು ಬಂಡವಾಳ ರೂ.೨.೫೫ ಕೋಟಿ, ಕ್ಷೇಮನಿಧಿ ರೂ.೭೩.೨೦ ಲಕ್ಷ, ಠೇವಣೆ ರೂ.೭.೮೩ ಕೋಟಿಗಳಿದ್ದು, ಸಂಘದಲ್ಲಿ ೨೧೦೦ ಸದಸ್ಯರು ಮರಣನಿಧಿಯನ್ನು ಪಾವತಿಸಿಕೊಂಡು ಬರುತ್ತಿದ್ದಾರೆ. ಉಳಿದ ಸದಸ್ಯರು ಕಡ್ಡಾಯವಾಗಿ ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಲ-ಬಡ್ಡಿ ಮನ್ನಾ ಮತ್ತು ಬಡ್ಡಿ ರಿಯಾಯಿತಿಗಳ ಸೌಲಭ್ಯ ನೀಡುತ್ತಿದ್ದು, ರೈತ ಸದಸ್ಯರಿಗೆ ಸಹಕಾರಿಯಾಗಿದೆ. ಎಲ್ಲಾ ಸದಸ್ಯರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಹೊಂದಿಕೊಳ್ಳಬೇಕು. ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಸೇರಿದಂತೆ ನಿರ್ದೇಶಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.