ಚೆಟ್ಟಳ್ಳಿ, ಅ. ೫: ಜಮಾಅತ್ ಇಸ್ಲಾಮ್ ಹಿಂದ್ ಕೊಡಗು ಜಿಲ್ಲಾ ಸಮಿತಿ ಹಾಗೂ ತಣಲ್ ಸಂಸ್ಥೆಯ ಸಹಯೋಗದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಪ್ರವಾದಿ ಮುಹಮ್ಮದರ ಜನ್ಮ ತಿಂಗಳ ಪ್ರಯುಕ್ತ ರಾಜ್ಯಾದ್ಯಂತ ನಡೆಸುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ಕಂಡಕ್ಕರೆಯ ಅಶ್ರಫ್ ಮತ್ತು ಜಮೀಲಾ ಎಂಬವರಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.
ಅಶ್ರಫ್ ಅವರಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧು ಮತ್ತು ಜಮೀಲಾರಿಗೆ ಸದಸ್ಯ ತೀರ್ಥಕುಮಾರ್ ಮನೆಯ ಕೀಲಿ ಕೈಗಳನ್ನು ಹಸ್ತಾಂತರಿಸಿದರು.
ಮೈಸೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರವಾದಿ ಮುಹಮ್ಮದರು ಬೋಧಿಸಿದ ಜೀವನ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಸಮಾಜ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಆರಂಭದಲ್ಲಿ ಉಮರ್ ಮೌಲವಿ ಕುರ್ ಆನ್ ಪಠಿಸಿದರು. ಜ.ಇ. ಹಿಂದ್ ಜಿಲ್ಲಾ ಸಮಿತಿ ಸದಸ್ಯರೂ, ತಣಲ್ ಸಂಸ್ಥೆಯ ಜಿಲ್ಲಾ ಹೊಣೆಗಾರರೂ ಆದ ಮುಹಮ್ಮದ್ ಮುಸ್ತಫಾ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಈತನಕ ೨೫೦ಕ್ಕಿಂತಲೂ ಹೆಚ್ಚು ಮನೆಗಳನ್ನು ನಿರ್ಮಿಸಿ ಜಾತಿ-ಮತ ಭೇದವಿಲ್ಲದೇ ಹಸ್ತಾಂತರಿಸಲಾಗಿದೆ. ಅದೇ ರೀತಿ ಮಡಿಕೇರಿಯಲ್ಲಿ ವೃದ್ಧಾಶ್ರಮ ಮತ್ತು ಸಿದ್ದಾಪುರದಲ್ಲಿ ಡಯಾಲಿಸಿಸ್ ಸೆಂಟರನ್ನು ಕೂಡಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಜಮಾಅತ್ ಕಾರ್ಯದರ್ಶಿ ಮಹಮ್ಮದ್ ರಫಿ ಟಿ.ಎಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸವಿತಾ, ಜ.ಇ. ಹಿಂದ್ ಸಿದ್ದಾಪುರ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಗಫೂರ್, ಸಾಮಾಜಿಕ ಕಾರ್ಯಕರ್ತ ಜುಬೈರ್ ಚೆಟ್ಟಳ್ಳಿ ಪಾಲ್ಗೊಂಡಿದ್ದರು.