ಜಲಾಶಯಗಳಿಗೆ ಒಳಹರಿವು ಕಡಿಮೆ-ಡಿ.ಕೆ. ಶಿವಕುಮಾರ್
ಬೆಂಗಳೂರು, ಅ. ೫: ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗುತ್ತಿದೆ. ಸದ್ಯ ಜಲಾಶಯಗಳಲ್ಲಿ ಅಗತ್ಯಕ್ಕಿಂತ ಅರ್ಧದಷ್ಟು ನೀರು ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ೧೦೬ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ (ಟಿಎಂಸಿ) ನೀರು ಬೇಕು. ಆದರೆ, ನಮ್ಮ ಜಲಾಶಯಗಳಲ್ಲಿ ಸದ್ಯ ೫೬ ಟಿಎಂಸಿ ನೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಅಲ್ಪ ಪ್ರಮಾಣದ ಮಳೆಯಿಂದಾಗಿ ಸುಮಾರು ೨೫ ಕ್ಯೂಸೆಕ್ ನೀರು ಹರಿದು ಬಂದಿದೆ. ಈಗ ಒಳಹರಿವು ಕಡಿಮೆಯಾಗುತ್ತಿದೆ ಎಂದು ತಿಳಿಸಿದರು. ಜಲಾಶಯಗಳಲ್ಲಿ ನೀರಿನ ಕೊರತೆಯಿರುವ ಕಾರಣ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದಿನ ಬೆಳೆ ಬೆಳೆಯಲು ಅವಕಾಶ ನೀಡದಿರಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಬೇಕು. ಬರ ಘೋಷಣೆ ಮಾಡಲಾಗಿದೆ. ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಈ ವರ್ಷ ಸಂಕಷ್ಟದ ವರ್ಷವಾಗಿದೆ ಎಂದು ಶಿವಕುಮಾರ್ ಹೇಳಿದರು. ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ತಮ್ಮ ಆರೋಪವನ್ನು ಪುನರುಚ್ಚರಿಸಿದ ಅವರು, ಕಾವೇರಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡಲಿ, ರಾಜ್ಯದ ಹಿತಾಸಕ್ತಿ ಕಾಪಾಡಲು ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ ಎಂದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸುದೀರ್ಘ ಹಗ್ಗಜಗ್ಗಾಟ ನಡೆಸುತ್ತಲೇ ಇವೆ. ಈ ನದಿಯು ಎರಡು ರಾಜ್ಯಗಳ ಜನರಿಗೆ ಜೀವನಾಧಾರಕ್ಕೆ ಪ್ರಮುಖ ಮೂಲವಾಗಿದೆ. ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೧೫ ರವರೆಗೆ ಬಿಳಿಗುಂಡ್ಲುವಿಗೆ ಪ್ರತಿದಿನ ೩,೦೦೦ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು.
ಜಾನ್ ಫಾಸ್ಸೆಗೆ ಸಾಹಿತ್ಯ ಕ್ಷೇತ್ರದ ನೊಬೆಲ್
ಸ್ಟಾಕ್ಹೋಮ್, ಅ. ೫: ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ ೨೦೨೩ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ. ಜಾನ್ ಫಾಸ್ಸೆ ಅವರ ಕಾದಂಬರಿಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ ಎಂದು ನೊಬೆಲ್ ಪ್ರಶಸ್ತಿ ಅಕಾಡೆಮಿ ಬಣ್ಣಿಸಿದೆ. ಫಾಸ್ಸೆ ಅವರ ಕೆಲಸವು "ಅವರ ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ" ಬೇರೂರಿದೆ ಎಂದು ನೊಬೆಲ್ ಸಾಹಿತ್ಯ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ಅವರು ಹೇಳಿದ್ದಾರೆ.
ಸಂಜಯ್ ಸಿಂಗ್ ೫ ದಿನ ಇ.ಡಿ. ವಶಕ್ಕೆ
ನವದೆಹಲಿ, ಅ. ೫: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದAತೆ ಬುಧವಾರ ಬಂಧನಕ್ಕೊಳಗಾಗಿರುವ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಕೋರ್ಟ್ ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶಿಸಿದೆ. ಬಂಧಿತ ಸಂಜಯ್ ಸಿಂಗ್ ಅವರನ್ನು ಇಡಿ ಅಧಿಕಾರಿಗಳು ಇಂದು ರೋಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ೧೦ ದಿನಗಳ ಕಾಲ ತನ್ನ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ ಕೋರ್ಟ್ ಸಂಜಯ್ ಸಿಂಗ್ ಅವರನ್ನು ಐದು ದಿನ ಮಾತ್ರ ಇಡಿ ವಶಕ್ಕೆ ನೀಡಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬAಧ ನಿನ್ನೆ ಬೆಳಿಗ್ಗೆ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಸತತ ೧೧ ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಿತ್ತು.
ಅರಣ್ಯ ಸಚಿವರನ್ನು ಭೇಟಿಯಾದ ಅರಣ್ಯ ಪಡೆ ಮುಖ್ಯಸ್ಥ
ಬೆಂಗಳೂರು, ಅ. ೫: ರಾಜ್ಯದಲ್ಲಿ ಲಕ್ಷ ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಆಗಿದ್ದು, ಅರಣ್ಯ ಭೂಮಿ ಮತ್ತು ಅರಣ್ಯ ಸಂಪತ್ತು ಕಾಪಾಡಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ನೂತನ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಕಳೆದ ೩೦ ರಂದು ನಿವೃತ್ತರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥ ರಾಜೀವ್ ರಂಜನ್ ಅವರ ಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ತರುವಾಯ ಇಂದು ದೀಕ್ಷಿತ್ ಅವರು ಸಚಿವರನ್ನು ಭೇಟಿ ಮಾಡಿ ಸಮಾಲೋಚಿಸಿದರು. ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಾಗಿದ್ದು, ವನ್ಯಜೀವಿಗಳು ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದು ಜೀವಹಾನಿ, ಬೆಳೆಹಾನಿ ಮಾಡುವುದನ್ನು ತಡೆಯಲು ಅರಣ್ಯದೊಳಗೆ ಮೇವು ಮತ್ತು ನೀರು ಲಭ್ಯವಾಗುವಂತೆ ಕ್ರಮ ವಹಿಸುವಂತೆ ಎಲ್ಲ ವಲಯಗಳಿಗೆ ಸೂಚಿಸುವಂತೆ ಸಚಿವರು ತಿಳಿಸಿದರು.
ಬಂಗಾಳದ ಸಚಿವ ರಥಿನ್ ಘೋಷ್ ಮನೆಯಲ್ಲಿ ಇ.ಡಿ ಶೋಧ
ಕೋಲ್ಕತ್ತ, ಅ. ೫: ಸ್ಥಳೀಯ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬAಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಪಶ್ಚಿಮ ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ರಥಿನ್ ಘೋಷ್ ಅವರ ನಿವಾಸ ಸೇರಿ ಹಲವು ಸ್ಥಳಗಳಲ್ಲಿ ಗುರುವಾರ ಏಕಕಾಲಕ್ಕೆ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ೨೪ ಪರಗಣ ಜಿಲ್ಲೆಯ ಮೈಕೆಲ್ ನಗರದಲ್ಲಿರುವ ಘೋಷ್ ಅವರ ನಿವಾಸವನ್ನು ತನಿಖಾಧಿಕಾರಿಗಳು ಕೇಂದ್ರೀಯ ಪಡೆಗಳ ದೊಡ್ಡ ತುಕಡಿಯೊಂದಿಗೆ ಬೆಳಿಗ್ಗೆ ೬.೧೦ಕ್ಕೆ ತಲುಪಿದರು. ಇದಲ್ಲದೆ ಇತರ ೧೨ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು ಎಂದು ಅವರು ಹೇಳಿದರು. ೨೦೧೪ ಮತ್ತು ೨೦೧೮ರ ನಡುವೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ೧,೫೦೦ ಮಂದಿಯನ್ನು ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ ಎಂದು ಇ.ಡಿ ಆರೋಪಿಸಿದೆ.