ಸುಂಟಿಕೊಪ್ಪ, ಅ. ೪: ೨೦೨೩ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಮಾದಾಪುರ ಗ್ರಾಮ ಪಂಚಾಯಿತಿಗೆ ಲಭಿಸಿದ್ದು, ತಾ. ೨ ರಂದು ವಿಕಾಸ ಸೌಧದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಮಾದಾಪುರ ಗ್ರಾ.ಪಂ. ಅಧ್ಯಕ್ಷ ಮನುಬಿದ್ದಪ್ಪ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮೇಶ್ ಭಾವೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಗ್ರಾಮ ಪಂಚಾಯಿತಿಯ ಅತ್ಯುತ್ತಮ ಕಾರ್ಯನಿರ್ವಹಣೆ, ಕಸ ವಿಲೇವಾರಿ, ಅಭಿವೃದ್ಧಿ ಕಾರ್ಯದಲ್ಲಿ ತೋರಿದ ಕಾರ್ಯಕ್ಷಮತೆ, ಪಾರದರ್ಶಕ ಆಡಳಿತ, ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಉತ್ತಮ ಆಡಳಿತ ನಡೆಸಿದ ರಾಜ್ಯದ ೨೩೩ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರಕಾರ ಗಾಂಧಿ ಗ್ರಾಮ ಪ್ರಶಸ್ತಿ ನೀಡಿದ್ದು, ಅದರಲ್ಲಿ ಕೊಡಗಿನ ಮಾದಾಪುರ, ಗುಡ್ಡೆಹೊಸೂರು, ಗಾಳಿಬೀಡು, ಹಾತೂರು ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯಿತಿ ಈ ಪ್ರಶಸ್ತಿಗೆ ಭಾಜನವಾಗಿದೆ. ರೂ. ೫ ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ವಿತರಿಸಲಾಯಿತು.ಮಡಿಕೇರಿ: ೩ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗಾಳಿಬೀಡು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಕೆ.ಎ., ಅಧ್ಯಕ್ಷೆ ಉಷಾ, ಉಪಾಧ್ಯಕ್ಷ ಪೆಮ್ಮಯ್ಯ ಹಾಗೂ ಸದಸ್ಯರು ತಾ. ೨ ರಂದು ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.