ಕೂಡಿಗೆ, ಆ. ೪: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಕ್ರೀಡಾ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾ. ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟವು ಹೆಚ್ಚು ಉಪಯುಕ್ತ ವಾಗಿದೆ. ಅಲ್ಲದೆ ಸ್ಪರ್ಧಾತ್ಮಕ ಯುಗದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಮುನ್ನುಗ್ಗಲು ಇಂತಹ ಕ್ರೀಡಾಕೂಟಗಳು ಪೂರಕವಾಗುತ್ತವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹಬಾಳ್ವೆಯೊಂದಿಗೆ ಭ್ರಾತೃತ್ವ ಬೆಳೆಸಿಕೊಳ್ಳಲು ಸಹಕಾರಿಯಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಮನೋಭಾವ ದಿಂದ ಭಾಗವಹಿಸಿ ಕ್ರೀಡಾ ಪ್ರತಿಭೆ ಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕ ದೇವ್‌ಕುಮಾರ್, ಸುಬ್ಬಯ್ಯ, ತರಬೇತು ದಾರರಾದ ಬಿದ್ಯಯ್ಯ, ಸುರೇಶ್, ಮಂಜುನಾಥ ಅಂತೋಣಿ ಡಿಸೋಜ, ದಿನಮಣಿ, ಮಹಾಬಲ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಮೈಸೂರು ವಿಭಾಗದ ಕ್ರೀಡಾಕೂಟದಲ್ಲಿ ಕೊಡಗು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಜಿಲ್ಲೆ ಸೇರಿದಂತೆ ೮ ಜಿಲ್ಲೆಯ ಹಾಕಿ, ಯೋಗ, ಜಿಮ್ನಾಸ್ಟಿಕ್ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.