ವರದಿ: ಚನ್ನನಾಯಕ

ಪೊನ್ನಂಪೇಟೆ, ಅ. ೨: ಪೊನ್ನಂಪೇಟೆ ತಾಲೂಕು ರಚನೆಗೊಂಡು ಎರಡು ವರ್ಷ ಕಳೆದಿದ್ದು, ನಿಯಮದಂತೆ ತಾಲೂಕು ಕೇಂದ್ರವನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಬೇಡಿಕೆಯನ್ನು ಹಿಂದಿನ ಶಾಸಕರ ನೇತೃತ್ವದಲ್ಲಿ ಸರ್ಕಾರದ ಮುಂದಿಟ್ಟು ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇದೀಗ ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಸರ್ಕಾರದ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ೧೩.೦೯.೨೦೨೩ ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದ್ದು, ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಿ, ಮಾಹಿತಿಯನ್ನು ಸಲ್ಲಿಸುವಂತೆ ಪಂಚಾಯಿತಿಗೆ ಪತ್ರ ಮುಖೇನ ಸೂಚಿಸಲಾಗಿದೆ. ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವಂತೆ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ತಿರಸ್ಕರಿಸಲು ಯಾವುದೇ ರೀತಿಯ ಕಾರಣವನ್ನು ಪತ್ರದಲ್ಲಿ ನಮೂದಿಸಿಲ್ಲ.

ಪೊನ್ನಂಪೇಟೆ ನಾಗರಿಕ ವೇದಿಕೆ ಸಂಪೂರ್ಣವಾಗಿ ಪ್ರತ್ಯೇಕ ತಾಲೂಕು ರಚನೆಯಲ್ಲಿ ಪ್ರಮುಖ ಪಾತ್ರವಹಿಸಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಳ್ಳಲು ಬೇಕಾದ ಎಲ್ಲಾ ಕಡತಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿ ಹಿಂದಿನ ಶಾಸಕ ಕೆ.ಜಿ. ಬೋಪಯ್ಯನವರ

(ಮೊದಲ ಪುಟದಿಂದ) ಮೂಲಕ ಸರ್ಕಾರಕ್ಕೆ ಒತ್ತಡ ಹಾಕಿಸಲಾಗಿತ್ತು. ವಿಧಾನಸಭಾ ಚುನಾವಣೆಯ ನಂತರ ಶಾಸಕರು ಬದಲಾಗಿದ್ದಾರೆ. ಸರ್ಕಾರವೂ ಬದಲಾವಣೆಯಾಗಿದ್ದು, ಪಟ್ಟಣ ಪಂಚಾಯಿತಿಯ ಬೇಡಿಕೆಯ ಅರ್ಜಿ ತಿರಸ್ಕೃತಗೊಂಡಿದೆ.

ಪುರಸಭೆಯಾಗಿ ಮಾರ್ಪಡಿಸಲು ಚಿಂತನೆ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್.ಪೊನ್ನಣ್ಣನವರು ಪೊನ್ನಂಪೇಟೆ, ರ‍್ವತೊಕ್ಕಲು ಹಾಗೂ ಗೋಣಿಕೊಪ್ಪಲು ತ್ರಿವಳಿ ಪಂಚಾಯಿತಿಗಳನ್ನು ಒಟ್ಟಾಗಿ ಸೇರಿಸಿ ಪುರಸಭೆಯಾಗಿ ಪರಿವರ್ತಿಸಲು ಚಿಂತನೆಯನ್ನು ನಡೆಸಿದ್ದು, ಈ ಮೂರು ಪಂಚಾಯಿತಿಗಳನ್ನು ಸೇರಿಸಿ ಪುರಸಭೆಯಾಗಿ ಪರಿವರ್ತನೆ ಮಾಡಲು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಒಟ್ಟು ಜನಸಂಖ್ಯೆ ೨೦,೦೦೦ ಮೇಲಿದ್ದರೆ ಹಾಗೂ ವಿಸ್ತೀರ್ಣವಿದ್ದರೆ ಪುರಸಭೆಯಾಗಿ ಮಾರ್ಪಾಡು ಮಾಡಬಹುದಾಗಿದ್ದು, ಈ ಎಲ್ಲ ಮಾನದಂಡಗಳನ್ನು ಹೊಂದಿರುವುದರಿAದ ಪೊನ್ನಂಪೇಟೆ ಇನ್ನೆರಡು ಪಂಚಾಯಿತಿಗಳನ್ನು ಒಳಗೊಂಡರೆ ಪುರಸಭೆಯಾಗಿ ಪರಿವರ್ತನೆಗೊಳಿಸಲು ಸಾಧ್ಯವಿದೆ. ಪುರಸಭೆಯಾಗಿ ಪರಿವರ್ತನೆಗೊಳ್ಳುವುದರಿಂದ ಅದರ ವ್ಯಾಪ್ತಿಯ ಎಲ್ಲಾ ಪ್ರದೇಶಗಳು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಸರ್ಕಾರದಿಂದ ಹೆಚ್ಚಿನ ಅನುದಾನವು ಕೂಡ ನೇರವಾಗಿ ದೊರಕುವುದರಿಂದ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಶಾಸಕರಾದ ಎ.ಎಸ್. ಪೊನ್ನಣ್ಣನವರ ಚಿಂತನೆ ಕಾರ್ಯರೂಪಕ್ಕೆ ಬಂದು, ಎಲ್ಲಾ ಅಂದುಕೊAಡತೆ ನಡೆದು, ಗೋಣಿಕೊಪ್ಪಲು, ರ‍್ವತೊಕ್ಕಲು ಪಂಚಾಯಿತಿ ಒಳಗೊಂಡ ಪೊನ್ನಂಪೇಟೆ ತಾಲೂಕು ಕೇಂದ್ರ ಪುರಸಭೆಯಾಗಿ ರೂಪುಗೊಂಡಲ್ಲಿ ಈ ಭಾಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ.