ಸೋಮವಾರಪೇಟೆ, ಅ.೧ : ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರಿ ನಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕುರಿಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಗರಗಂದೂರು ಗ್ರಾಮದ ಉಮ್ಮರ್ ಖಾನ್ ಅವರಿಗೆ ಸೇರಿದ ಕುರಿಯ ಮೇಲೆ ರಾತ್ರಿ ೧೨ ಗಂಟೆ ಸುಮಾರಿಗೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಕುರಿಯ ಆರ್ತನಾದ ಕೇಳಿದ ಮನೆ ಮಾಲೀಕರು ಹೊರಬಂದ ಸಂದರ್ಭ ಚಿರತೆ ಸಮೀಪದ ತೋಟದೊಳಗೆ ತೆರಳಿದೆ. ಸ್ಥಳಕ್ಕೆ ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸತೋಟ, ಸದಸ್ಯ ರಮೇಶ್, ಪಶು ವೈದ್ಯಾಧಿಕಾರಿ ಬಾದಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಅರಣ್ಯ ಇಲಾಖೆಯ ಜಗದೀಶ್, ಕಾಂಗ್ರೆಸ್ ಓ.ಬಿ.ಸಿ. ಘಟಕದ ಅಧ್ಯಕ್ಷ ಸುಂದರ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.