ಮಡಿಕೇರಿ, ಅ. ೧: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ತಾ. ೭ರಂದು ಭಾರತ ಕಮ್ಯೂನಿಸ್ಟ್ ಪಕ್ಷ ವತಿಯಿಂದ ರಾಜ್ಯ ವ್ಯಾಪಿ ಜನಾಗ್ರಹ ಚಳವಳಿ ಹಮ್ಮಿಕೊಳ್ಳ ಲಾಗಿದ್ದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಪ್ರತಿಭಟನೆ ನಡೆಯಲಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಕೆ.ವಿ. ಸುನಿಲ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಈ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಅಸಂಘಟಿತ ಕಾರ್ಮಿಕರಿಗೆ ಕಾಂಗ್ರೆಸ್ ಘೋಷಿಸಿದ್ದ ೬ನೇ ಗ್ಯಾರಂಟಿಯನ್ನು ಜಾರಿಗೊಳಿಸಬೇಕು. ಕೊಡಗಿನ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ನಿವೇಶನಗಳನ್ನು ಹಂಚಬೇಕು.

ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಜಿಲ್ಲೆಯಲ್ಲಿ ಡಯಾಲಿಸಿಸ್ಗಾಗಿ ಮಡಿಕೇರಿ ಸೋಮವಾರಪೇಟೆ ಹಾಗೂ ವೀರಾಜಪೇಟೆಗಳ ಆಸ್ಪತ್ರೆಗಳಲ್ಲಿ ಒಟ್ಟು ೫೦ ಹಾಸಿಗೆಗಳನ್ನು ವ್ಯವಸ್ಥೆಗೊಳಿಸಬೇಕು. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಖಾಯಂಗೊಳಿಸಲು ಯೋಜನೆ ರೂಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ತಾ. ೭ ರಂದು ಬೆಳಿಗ್ಗೆ ೧೦ ಗಂಟೆಗೆ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಅವರುಗಳು ತಿಳಿಸಿದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಎಸ್.ಹೆಚ್. ಶಭಾನ ಉಪಸ್ಥಿತರಿದ್ದರು.