ಸೋಮವಾರಪೇಟೆ, ಸೆ. ೩೦ :ಸಮೀಪದ ಗೋಣಿಮರೂರು ಗ್ರಾಮದಲ್ಲಿ ಆನೆ ಹಾವಳಿಯಿಂದ ಬೇಸತ್ತ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿನ ಸುತ್ತ ಮುತ್ತಲಿನ ರೈತರು ವ್ಯವಸಾಯವನ್ನು ಅವಲಂಬಿತವಾಗಿದ್ದು, ಕಾಡು ಮೃಗಗಳಿಂದ ಬೇಸಾಯ ಹಾಳಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಸೂರಿ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಸಿಹಿ ಗೆಣಸು ಬೆಳೆದಿದ್ದು, ತಡರಾತ್ರಿ ಆನೆ ಹಿಂಡು ಬಂದು ಸುಮಾರು ಅರ್ಧ ಎಕರೆಯಷ್ಟು ತಿಂದು ಹಾಳು ಮಾಡಿದೆ. ಈ ಭಾಗದ ಮೀಸಲು ಅರಣ್ಯದ ಸುತ್ತ ಸೋಲಾರ್ ತಂತಿ ಅಳವಡಿಸಿದ್ದು ಆನೆಗಳ ಉಪಟಳದಿಂದ, ತಂತಿ ತುಂಡಾಗಿದ್ದು ಯಾವುದೇ ಅಡಚಣೆ ಇಲದೆ ಸರಾಗವಾಗಿ ವ್ಯವಸಾಯದ ಜಮೀನಿಗೆ ಧಾವಿಸುತ್ತಿವೆ.
ಇಲ್ಲಿನ ರೈತರು ಅರಣ್ಯ ಸಿಬ್ಬಂದಿ ಮೇಲೆ ಆಕ್ರೋಶ ಹೊರಹಾಕಿದ್ದು ನಮಗೆ ಆನೆ ಓಡಿಸಲು ಯಾವುದೇ ಉಪಕರಣಗಳು ಮತ್ತು ಪಟಾಕಿಗಳನ್ನು ನೀಡುತ್ತಿಲ್ಲ. ನಮ್ಮ ಭಾಗಕ್ಕೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಿ. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ.