ಕೂಡಿಗೆ, ಸೆ. ೩೦: ಆಗಾಗ್ಗೆ ಬಂದು ಹೋಗುತ್ತಿದ್ದ ಮಳೆ., ಗಿಡ-ಮರಗಳ ನಡುವಿನಿಂದ ತಂಪಾಗಿ ಬೀಸುತ್ತಿದ್ದ ಗಾಳಿ., ಸದ್ದಿಲ್ಲದೇ ತನ್ನ ಪಾಡಿಗೆ ಹರಿಯುತ್ತಿದ್ದ ಕಾವೇರಿ., ಪ್ರಾಣಿ ಪಕ್ಷಿಗಳ ಇಂಚರದ ನಡುವೆ ರಸವತ್ತಾದ ಪದ ಪುಂಜಗಳ ಸಾಲುಗಳು ಕಿವಿಗಳನ್ನು ಇಂಪಾಗಿಸಿದವು., ಆ ನಿಸರ್ಗದ ಮಡಿಲಲ್ಲಿ ಕಾವ್ಯ ಸುಧೆಯೇ ಹರಿದಿತ್ತು..
ಈ ಸುಂದರ ಚಿತ್ರಣ ಕಂಡು ಬಂದಿದ್ದು ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮ ತಾಣದಲ್ಲಿ., ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಿರಿ ಸಂಭ್ರಮ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿ ಮನಸುಗಳ ಭಾವನೆಗಳು ಕಾವ್ಯ ರಸಧಾರೆಯಾಗಿ ಹರಿದು ಕೇಳುಗರ ಕಿವಿಗಳನ್ನು ತಂಪಾಗಿಸಿದವು. ಮಣ್ಣು., ಪ್ರಕೃತಿ., ಅಮ್ಮ-ಅಪ್ಪ., ಕನ್ನಡ ನಾಡು ನುಡಿ, ಪ್ರೇಮ., ಸಮಾಜದಲ್ಲಿನ ಅಂಕುಡೊAಕುಗಳೊAದಿಗೆ ಯೋಧನ ಪತ್ನಿಯ ಕಣ್ಣೀರ ಧಾರೆಯೂ ಕವನಗಳ ರೂಪ ತಳೆದು ಕಾವ್ಯಾಸಕ್ತರಿಗೆ ಉಣಬಡಿಸಿದವು. ಒಟ್ಟು ೪೩ ಮಂದಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಸಮಾಜದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಧೈರ್ಯ ತುಂಬುವAತಹ ಸಂದೇಶಗಳನ್ನು ಮನೋಬಲ ಎಂಬ ಕವನದ ಮೂಲಕ ಸಿಂಚನ ಗೊರಹಳ್ಳಿ ಸಾರಿದರೆ, ದೀಪಿಕಾ ಸಂದೀಪ್ ಕನ್ನಡದ ಸಂಭ್ರಮವನ್ನು ಕೊಂಡಾಡಿದರು. ಪೂರ್ಣಿಮಾ ಚಾರ್ಲಿ ನವರಸಗಳ ಮಿಲನ ಮಾಡಿದರೆ, ಅನಿತಾ ಶುಭಾಕರ್ ಮಾನವೀಯತೆ ಉಳಿಸಿಕೊಡಿ ಎಂದು ಗೋಗರೆದರು. ಕಣಜಾಲು ಪೂವಯ್ಯ ನಿಸರ್ಗದ ಮಡಿಲಲ್ಲಿ ವಿಹರಿಸಿದರೆ, ಸುಕುಮಾರ್ ತೊರೆನೂರು ಬಾಳುಮೆಯ ಹಾದಿಯನ್ನು ತೋರಿಸಿಕೊಟ್ಟರು. ಮರೆಯಾಗುತ್ತಿರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಎಂದು ಕೇಕಡ ಇಂದುಮತಿ ರವೀಂದ್ರ ಕೋರಿಕೆಯನ್ನು ಮುಂದಿಟ್ಟರೆ, ಹೇಮಂತ್ ಪಾರೇರ ಹುತಾತ್ಮನಾದ ಯೋಧನ ಪತ್ನಿಯ ಕಣ್ಣೀರು ಒರೆಸುವ ಪ್ರಯತ್ನ ಮಾಡಿದರು. ಎಸ್.ಎಂ. ಆಶಾ ಹಡೆದ ಅಮ್ಮನನ್ನು ನೆನೆಸಿಕೊಂಡರೆ, ಸುನಿತಾ ವಿಶ್ವನಾಥ್ ಅಪ್ಪನನ್ನು ಕೊಂಡಾಡಿದರು. ಮೂಕಳೇರ ಟೈನಿ ಪೂಣಚ್ಚ ಕನ್ನಡಮ್ಮನ ಅಳಲನ್ನು ತೋಡಿಕೊಂಡರೆ, ಮೀರಾ ಸುಮನ್ ಕ್ಯಾಸ್ತಲಿನ್ ಸ್ವಸ್ಥ ಸಮಾಜದ ಹುಡುಕಾಟದಲ್ಲಿದ್ದರು. ಪೆರುಬಾಯಿ ತುಳಸಿ ಸುಬ್ರಮಣಿ ಕವನವನ್ನೇ ಮಾತನಾಡಿಸಿದಾಗ ರಾಧಿಕಾ ವಿಶ್ವನಾಥ್ ಸಮಯದ ಅರಿವು ಮೂಡಿಸಿದರೆ, ಜಾನ್ ಪಿ.ಎಸ್. ಮಾರುತಿಯನ್ನು ನಮಿಸಿದರು.
ಇನ್ನುಳಿದಂತೆ ಹರೀಶ್ ಸರಳಾಯ, ಜಲಜಾ ಶೇಖರ್, ಜಲಾ ಕಾಳಪ್ಪ, ಮಂಜುನಾಥ್ ಚಿರಕನಹಳ್ಳಿ, ಬೊಟ್ಟೋಳಂಡ ನಿವ್ಯಾ ದೇವಯ್ಯ, ಡಿ.ಹೆಚ್. ಪುಷ್ಪ, ನ.ಲ.ವಿಜಯ, ಹೇಮಲತಾ ಪೂರ್ಣ ಪ್ರಕಾಶ್, ಮಹೇಶ್ ತಿಮ್ಮಯ್ಯ, ರಾಚೂ ಶ್ಯಾಂ, ರೇಖಾ ಪಿ.ಪಿ., ವೈಲೇಶ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಮಾಲಾಮೂರ್ತಿ, ಸೈಮನ್ ಎಸ್., ಪವಿತ್ರ ಹೆಚ್.ಆರ್., ಉಳುವಂಗಡ ಕಾವೇರಿ ಉದಯ, ರಂಜಿತ್ ಕುದುಪಜೆ, ಕವಿತಾ ಜನಾರ್ಧನ್, ವತ್ಸಲಾ ಶ್ರೀಶಾ, ಗೀತಾಂಜಲಿ ಮಹೇಶ್, ಜಲಜಾ ಚಂದ್ರಶೇಖರ್, ಶರ್ಮಿಳಾ ರಮೇಶ್, ಕಡ್ಲೇರ ಜಯಲಕ್ಷಿö್ಮ, ಸುಳ್ಯಕೋಡಿ ಜೀತ ಚಿಂತನ್, ರವೀಂದ್ರ ಹಾನಗಲ್ ಸೇರಿದಂತೆ ಪುಟಾಣಿಗಳಾದ ಕೊಂಬAಡ ತನ್ಮಯ ಚಂದ್ರಶೇಖರ್ ಹಾಗೂ ಕಡ್ಲೇರ ರುಶಿಕಾ ಕವನಗಳನ್ನು ವಾಚನ ಮಾಡಿ ಗಮನ ಸೆಳೆದರು.
ಭಾವನೆಗಳು ಎದೆಯಾಳದಿಂದ ಬರಬೇಕು
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ; ಸಾಹಿತ್ಯ ಎಲ್ಲರಿಗೂ ಅಷ್ಟು ಸುಲಭದಲ್ಲಿ ಒಲಿಯುವದಿಲ್ಲ, ಅದೊಂದು ರೀತಿಯ ತಪಸ್ಸಿನ ಫಲವಾಗಿದೆ. ಹಾಗೆಯೇ ಬರೆದದ್ದೆಲ್ಲ ಸಾಹಿತ್ಯವಾಗಲ್ಲ, ಗೀಚಿದ್ದೆಲ್ಲ ಕವನಗಳಾಗುವದಿಲ್ಲ. ಅದು ಭಾವನೆಗಳ ಮೂಲಕ ಹೊರಬರಬೇಕು, ಭಾವನೆಗಳು ಎದೆಯಾಳದಿಂದ ಬರಬೇಕೆಂದು ಹೇಳಿದರು. ಸಾಹಿತ್ಯ, ಕವನ ರಚನೆ ಮಾಡಬೇಕೆಂದರೆ ಮೊದಲು ಬೇರೆಯವರ ಸಾಹಿತ್ಯಗಳನ್ನು ಓದಬೇಕು, ಹಾಗಾದ್ರೆ ಮಾತ್ರ ಉತ್ತಮ ಸಾಹಿತ್ಯ ಮೂಡಿಬರಲು ಸಾಧ್ಯ. ಸುಖ-ದುಖಗಳಿದ್ದಾಗಲೂ ಕವನಗಳು ಹುಟ್ಟಿಕೊಳ್ಳುತ್ತವೆ, ಇಂದಿನ ಗೋಷ್ಠಿಯಲ್ಲಿ ೪೩ ಮಂದಿ ಕವಿಗಳು ಭಾಗವಹಿಸಿರುವದು ಒಂದು ಇತಿಹಾಸ ಎಂದು ಹೇಳಿದರು.