ಕುಶಾಲನಗರ, ಸೆ. ೨೯: ಚಿಂತನಾಶೀಲ, ಸೃಜನಶೀಲ ಸಾಹಿತ್ಯಗಳು ಜನರ ಮನಸಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಸುಳ್ಯದ ಉಪನ್ಯಾಸಕಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.ಅನುರಾಧ ಕುರುಂಜಿ ಹೇಳಿದರು.

ಕರ್ನಾಟಕವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಹಮ್ಮಿಕೊಂಡಿದ್ದ "ಸಿರಿ ಸಂಭ್ರಮ" ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯದಲ್ಲಿ ಜನಸಂಸ್ಕೃತಿಗೆ ಬೆಲೆ ಇರಬೇಕು, ಸಮಾಜದ ಅಸ್ತಿತ್ವಕ್ಕೆ ಬೆಲೆ ಇರಬೇಕು. ಆಗ ಆ ಭಾಷೆ, ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ. ಸಾಹಿತ್ಯ ಉಳಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ. ನಾಡಿನ ಹಿರಿಯ ಸಾಹಿತಿಗಳು ಜನ ಸಂಸ್ಕೃತಿ, ಸಮಾಜಮುಖಿ ವಿಚಾರಗಳು, ಜನರ ಮನಸನ್ನು ಅರ್ಥೈಸಿ ಸಾಹಿತ್ಯ ರಚನೆ ಮಾಡಿದ್ದು ಹಾಗಾಗಿ ಅವುಗಳು ಸಮಾಜಕ್ಕೆ ಕೊಡುಗೆಯಾಗಿವೆ. ಆದರೆ ಇಂದಿನ ಸಾಹಿತ್ಯ ಹಾಗೂ ಮಾಡುವ ಕೆಲಸಗಳೆಲ್ಲವೂ ಹೆಸರು ಮಾಡುವದಕ್ಕಾಗಿ ಎಂದು ಹೇಳುವ ಮಟ್ಟಕ್ಕೆ ತಲಪಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಲೋಕಾಂತ ಹಾಗೂ ಏಕಾಂತವಿದ್ದಾಗ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಪ್ರಸ್ತುತ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಹಾಗಾಗಿ ಒಳ್ಳೆಯ ಸಾಹಿತ್ಯಗಳು ಬರುತ್ತಿಲ್ಲ, ಮಕ್ಕಳು ಪಠ್ಯದ ಹೊರತಾದ ವಿಚಾರಗಳನ್ನು ಓದುವುದಿಲ್ಲ, ತಿಳಿದುಕೊಳ್ಳುವದೂ ಇಲ್ಲ. ಇದಕ್ಕೆ ಪೋಷಕರೂ ಕಾರಣರಾಗಿದ್ದಾರೆ. ನಾವೆಲ್ಲರೂ ಅಂಕಗಳ ಮಾರ್ಕ್ಸ್ವಾದಿಗಳಾಗಿದ್ದೇವೆ. ಸಮಾಜದಲ್ಲಿ ಸಾಹಿತ್ಯ, ಸಂಸ್ಕೃತಿ, ಸಂಬAಧಗಳೆಲ್ಲವೂ ಬೇಕು. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ಪ್ರವೃತ್ತಿ ಸೃಷ್ಟಿಯಾಗಬೇಕು. ಓದುವ ಚಟವನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು. ಸಂಘಟನೆಗಳನ್ನು ಮುನ್ನಡೆಸುವದು ಕಷ್ಟದ ಕೆಲಸ; ಕೈ ಹಿಡಿಯುವವರಿಗಿಂತ ಕಾಲೆಳೆಯುವವರೇ ಹೆಚ್ಚಾಗಿರುತ್ತಾರೆ. ಅಂತಹದರಲ್ಲಿ ಇಷ್ಟೊಂದು ಕವಿ ಮನಸುಗಳನ್ನು ಒಗ್ಗೂಡಿಸಿ ಕಾರ್ಯಕ್ರಮ ಮಾಡಿರುವದು ಶ್ಲಾಘನೀಯವೆಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವಿಜಯ ವಿಷ್ಣು ಭಟ್ ಮಾತನಾಡಿ; ಮನಸುಗಳನ್ನು ಒಂದು ಮಾಡುವ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಸಾಹಿತ್ಯ ಕಸದ ಸಾಲಿಗೆ ಸೇರದೆ ರತ್ನಗಳ ಪಟ್ಟಿಗೆ ಸೇರುವಂತಹ ಸಾಹಿತ್ಯ ನಿರ್ಮಾಣವಾಗಬೇಕು. ಬೇರೆ ಭಾಷೆಯಲ್ಲಿಯೂ ಉತ್ತಮ ಸಾಹಿತ್ಯಗಳಿದ್ದು, ಎಲ್ಲವನ್ನೂ ಸ್ವೀಕರಿಸುತ್ತಾ ಬೇರೆ ಭಾಷೆಯ ಒಳಿತನ್ನು ಮೆಚ್ಚೋಣ, ನಮ್ಮ ಭಾಷೆಯನ್ನು ಬೆಳೆಸೋಣ. ಈ ನಿಟ್ಟಿನಲ್ಲಿ ತಾಯಂದಿರು ಜಾಗೃತರಾಗಬೇಕು. ಮಕ್ಕಳಿಗೆ ನಮ್ಮ ಭಾಷೆ ಕಲಿಸಬೇಕು; ಅವರಲ್ಲಿ ನಾಡು ನುಡಿಯನ್ನು ಸಂಪತ್ತನ್ನು ತುಂಬಿದರೆ ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು.ಕೃತಿ ಬಿಡುಗಡೆ

ಶರ್ಮಿಳಾ ರಮೇಶ್ ಅವರು ಬರೆದ ಬಾಗಿಲು ಮುಚ್ಚಿದ ಕವನಗಳು.., ಮೌನ ಮಾತಾದಾಗ ಎಂಬ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಶಿಕ್ಷಕ ಹಾಗೂ ಕಲಾವಿದ ಉ.ರಾ.ನಾಗೇಶ್ ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು; ಒಟ್ಟು ೫೫ ಕವನಗಳನ್ನು ಒಳಗೊಂಡಿರುವ ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಭಾವನೆಗಳನ್ನು ಹಂಚದವರು ಹುಚ್ಚರಾಗುತ್ತಾರೆ, ಭಾವನೆಗಳನ್ನು ಹಂಚಿಕೊಳ್ಳುವವರು ಮನುಷ್ಯ ರಾಗುತ್ತಾರೆ. ಭಾವನೆಗಳಿಗೆ ಭಾಷೆ, ಬಣ್ಣ, ಬರಹಗಳ ಮೂಲಕ ಜೀವ ತುಂಬಿದಾಗ ಕೃತಿಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಸಂಸ್ಥೆ ಪೂರ್ವಾಧ್ಯಕ್ಷ, ಬಳಗದ ಪದಾಧಿಕಾರಿ ಎಂಡಿ. ರಂಗಸ್ವಾಮಿ; ೧೫ವರ್ಷಗಳ ಹಿಂದೆ ಹುಟ್ಟು ಹಾಕಿದ ಸ್ನೇಹ ಸಿರಿ ಬಳಗದ ಮೂಲಕ ಹಲವಾರು ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯಲ್ಲಿರುವ ಹಿನ್ನೆಲೆಯಲ್ಲಿ ವರ್ಷದಲ್ಲಿ ಒಟ್ಟು ೫೦ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಒಂದು ಕವಿಗೋಷ್ಠಿ ಮೂಲಕ ಚಾಲನೆ ನೀಡುತ್ತಿರುವದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಿರಿ ಸ್ನೇಹಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ; ಬಳಗದ ಮೂಲಕ ಒಟ್ಟು ವಿವಿಧ ರೀತಿಯ ಕಾರ್ಯಕ್ರಮಗಳನ್ನು ವರ್ಷದಲ್ಲಿ ನಡೆಸಲು ತೀರ್ಮಾನಿಸ ಲಾಗಿದೆ. ಜಿಲ್ಲೆಯಲ್ಲಿ ಬಹುತೇಕ ಸಾಹಿತಿಗಳು, ಶಿಕ್ಷಕರು, ಉಪನ್ಯಾಸಕರು ಗಳಾಗಿದ್ದು, ಶಾಲಾ, ಕಾಲೇಜು ಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಹಕಾರ ನೀಡುವಂತೆ ಕೋರಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಅತಿಥಿ ಯಾಗಿದ್ದ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ, ಎಂ. ಡಿ. ರಂಗಸ್ವಾಮಿ ಹಾಗೂ ಡಾ. ಅನುರಾಧ ಕುರುಂಜಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾಹಿತಿಗಳಾದ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ವೀರಾಜಪೇಟೆಯ ವೈಲೇಶ್ ಪಿ.ಎಸ್., ಟಿ.ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ, ಸೊಮವಾರಪೇಟೆಯ ನ.ಲ.ವಿಜಯ ಅವರುಗಳು ಉಪಸ್ಥಿತರಿದ್ದರು. ಕವಯತ್ರಿ ಮಾಲಾದೇವಿ ಪ್ರಾರ್ಥಿಸಿದರೆ, ಹೇಮಾವತಿ ಸ್ವಾಗತಿಸಿದರು. ಪೆರುಬಾಯಿ ತುಳಸಿ ಸುಬ್ರಮಣಿ ಅತಿಥಿಗಳ ಪರಿಚಯ ಮಾಡಿದರೆ, ತಳೂರು ಉಷಾರಾಣಿ ಹಾಗೂ ಶರ್ಮಿಳಾ ರಮೇಶ್ ಅವರುಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು.