ಭಾಗಮಂಡಲ, ಸೆ. ೨೮: ಅಕ್ಟೋಬರ್ ೧೮ರ ಮುಂಜಾನೆ ನಡೆಯುವ ತುಲಾ ಸಂಕ್ರಮಣಕ್ಕೆ ಸಂಬAಧಿಸಿದAತೆ ಭಾಗಮಂಡಲದಲ್ಲಿ ತಾ. ೨೭ ರಂದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು.
ಅಕ್ಟೋಬರ್ ೧೮ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಜರುಗಿತು. ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು ತಮ್ಮ ಐನ್ ಮನೆಯಲ್ಲಿ ಒಟ್ಟು ಸೇರಿ ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾ. ೨೭ ರಂದು ಬೆಳಿಗ್ಗೆ ೯.೨೯ಕ್ಕೆ ತುಲಾ ಲಗ್ನದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಹಾಕಿದರು. ಅಕ್ಟೋಬರ್ ಐದರಂದು ಗುರುವಾರ ೮.೩೧ಕ್ಕೆ ಆಜ್ಞಾ ಮುಹೂರ್ತ ನಡೆಯಲಿದೆ.
ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಭಾಗಮಂಡಲ ದೇವಾಲಯದ ಆಡಳಿತಾಧಿಕಾರಿ ಎಂ.ಜಿ. ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
- ವರದಿ : ಸುನಿಲ್ ಕುಯ್ಯಮುಡಿ