ಮಳೆ ಕೊರತೆಯಿಂದ ೧ ಕೋಟಿ ಎಕರೆಯಲ್ಲಿ ಬೆಳೆ ಹಾನಿ: ಸಿ.ಎಂ
ಬೆAಗಳೂರು, ಸೆ. ೨೯: ಅರಣ್ಯ ಪ್ರದೇಶ ಕ್ಷೀಣಿಸಿದರೆ ಮಳೆ ಪ್ರಮಾಣವೂ ಕ್ಷೀಣಿಸುತ್ತದೆ. ಈ ಬಾರಿ ಮಳೆಯ ಕೊರತೆಯಿಂದ ೧ ಕೋಟಿ ಎಕರೆ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ಅರಣ್ಯ ಇಲಾಖೆಯಲ್ಲಿ ಶೌರ್ಯ ಮತ್ತು ಧೈರ್ಯದಿಂದ ಸೇವೆ ಸಲ್ಲಿಸಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದ ೫೦ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯ ಮಂತ್ರಿಗಳ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಭೌಗೋಳಿಕ ಪ್ರದೇಶದ ಶೇ. ೩೩ರಷ್ಟು ಹಸಿರು ಹೊದಿಕೆ ಇದ್ದರೆ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು. ಮಳೆ ಕಡಿಮೆಯಾದರೆ, ಬೆಳೆ ಉತ್ಪಾದನೆ ಕಡಿಮೆಯಾಗುತ್ತದೆ, ಆಗ ರಾಜ್ಯದ ಆದಾಯ ಕ್ಷೀಣಿಸುತ್ತದೆ. ಇದರಿಂದ ತಲಾದಾಯವೂ ಕುಗ್ಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ ಎಂದು ಪ್ರತಿಪಾದಿಸಿದರು. ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ವನ್ಯ ಜೀವಿಗಳಿಗೆ ಅರಣ್ಯದಲ್ಲಿ ಸಾಕಷ್ಟು ಮೇವು, ಆಹಾರ ಮತ್ತು ನೀರು ಲಭ್ಯವಾದರೆ ಅವು ಕಾಡಿನಿಂದ ನಾಡಿಗೆ ಬರುವುದು ತಪ್ಪುತ್ತದೆ. ಹೀಗಾಗಿ ಅರಣ್ಯಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ಅರಣ್ಯ, ವನ್ಯಜೀವಿ ಸಂರಕ್ಷಣೆ-ಮುAಚೂಣಿಯಲ್ಲಿ ರಾಜ್ಯ: ಈಶ್ವರ ಖಂಡ್ರೆ
ಬೆAಗಳೂರು, ಸೆ. ೨೯: ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ, ಇದಕ್ಕೆ ಆನೆ ಮತ್ತು ಹುಲಿ ಸಂಖ್ಯೆಯಲ್ಲಿ ರಾಜ್ಯ ಅಗ್ರ ಎರಡು ಸ್ಥಾನದಲ್ಲಿರುವುದು ಸಾಕ್ಷಿ ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ಅರಣ್ಯ ಇಲಾಖೆ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಮೃದ್ಧ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಹೊಂದಿದ್ದು ಸಸ್ಯಶ್ಯಾಮಲೆಯಾಗಿದೆ ಎಂದರು. ನಮ್ಮ ರಾಜ್ಯದಲ್ಲಿ ೬ ಸಾವಿರದ ೩೯೫ ಆನೆಗಳಿವೆ ಅದೇ ರೀತಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ೨ನೇ ಸ್ಥಾನದಲ್ಲಿದೆ ರಾಜ್ಯದಲ್ಲಿ ಸುಮಾರು ೫೬೦ ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾAಧಿ ಅವರು ೧೯೭೩ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ ೫೦ ವರ್ಷ ತುಂಬಿರುವುದೂ ಮತ್ತೊಂದು ಸಂತೋಷದಾಯಕ ವಿಚಾರ ವಾಗಿದೆ. ೧೯೮೦ರಲ್ಲಿ ದೇಶದಲ್ಲಿ ಕೇವಲ ೧,೮೨೭ರಷ್ಟಿದ್ದ ಹುಲಿಗಳ ಸಂಖ್ಯೆ ಈಗ ೩ ಸಾವಿರ ದಾಟಿದೆ. ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇಂದಿರಾಜಿ ಅವರು ತಂದ ಕಾಯಿದೆ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಅ. ೫ಕ್ಕೆ ಕೆಆರ್ಎಸ್ ಅಣೆಕಟ್ಟೆಗೆ ಮುತ್ತಿಗೆ:ವಾಟಾಳ್ ನಾಗರಾಜ್
ಬೆಂಗಳೂರು, ಸೆ. ೨೯: ಕಾವೇರಿ ನೀರು ವಿವಾದ ಸಂಬAಧ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆದರೆ, ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು. ಬಂದ್ಗೆ ಕರೆ ನೀಡಿದ ಪ್ರಮುಖರಲ್ಲಿ ಒಬ್ಬರಾದ ವಾಟಾಳ್ ನಾಗರಾಜ್ ಅವರನ್ನು ಬಿಡುಗಡೆ ಮಾಡಿದ ಪೊಲೀಸರು, ಪ್ರತಿಭಟನೆಗಾಗಿ ಸರ್ಕಾರ ನಿಗದಿಪಡಿಸಿದ ಫ್ರೀಡಂ ಪಾರ್ಕ್ಗೆ ವಾಹನದಲ್ಲಿ ಕರೆತಂದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಅಕ್ಟೋಬರ್ ೫ ರಂದು ಕನ್ನಡಪರ ಸಂಘಟನೆಗಳು ಕೆಆರ್ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ಈ ಮಧ್ಯೆ, ಕರ್ನಾಟಕ ಬಂದ್ ಅಂಗವಾಗಿ ಮಂಡ್ಯ ಜಿಲ್ಲೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ ೨೦೦ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಮಾವೋವಾದಿ ಪೊಲೀಸರ ಎನ್ಕೌಂಟರ್ಗೆ ಬಲಿ
ಬಾಲಘಾಟ್, ಸೆ. ೨೯: ಮಧ್ಯ ಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ತಲೆಗೆ ರೂ. ೧೪ ಲಕ್ಷ ಬಹುಮಾನ ಹೊತ್ತಿದ್ದ ೨೫ ವರ್ಷದ ಮಾವೋವಾದಿಯನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಮಾವೋವಾದಿಯನ್ನು ಕಮ್ಲು ಎಂದು ಗುರುತಿಸಲಾಗಿದ್ದು, ನಿಷೇಧಿತ ಸಂಘಟನೆಯ ಮಾವೋವಾದಿ ದಲಂ ತಾಂಡಾ ದಡೆಕಾಸ ಘಟಕದ ಸಕ್ರಿಯ ಸದಸ್ಯನಾಗಿದ್ದ.
ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; ೫೨ ಜನರು ಸಾವು
ಕರಾಚಿ, ಸೆ. ೨೯: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ರ್ಯಾಲಿ ನಡೆಸಲು ಜನರು ಸೇರಿದ್ದಾಗ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ ೫೨ ಜನರು ಸಾವಿಗೀಡಾಗಿದ್ದಾರೆ ಮತ್ತು ೫೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ. ರ್ಯಾಲಿ ನಡೆಯುವ ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಸ್ತುಂಗ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನವಾಜ್ ಗಶ್ಕೋರಿ ಕೂಡ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಈದ್ ಮಿಲಾದುನ್ ನಬಿಯನ್ನು ಆಚರಿಸಲು ಜನರು ಒಂದೆಡೆ ಸೇರಿದ್ದಾಗ ಪ್ರಬಲ ಸ್ಫೋಟ ಸಂಭವಿಸಿದೆ.