ಮಡಿಕೇರಿ, ಸೆ. ೨೯: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಆಯುಷ್ಮಾನ್ ದಿವಸ ೫ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಆಸ್ಪತ್ರೆಗೆ ಬರುವ ಶೇ. ೯೦ ರಷ್ಟು ರೋಗಿಗಳನ್ನು ಈ ಯೋಜನೆಯೊಳಗೆ ಒಳಪಡಿಸಲು ಪ್ರಯತ್ನಿಸಲಾಗುತ್ತಿದ್ದು, ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವಾಗ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಕಾರ್ಡ್, ಆಧಾರ್ ಕಾರ್ಡ್ ತಂದಲ್ಲಿ ಯೋಜನೆಯನ್ನು ಶೇ. ೧೦೦ ರಷ್ಟು ಒದಗಿಸಲು ಸಾಧ್ಯವಾಗಲಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ರೂಪೇಶ್ ಗೋಪಾಲ್ ಮಾತನಾಡಿ, ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಏಳು ಬೀಳುಗಳು ಹಾಗೂ ಯೋಜನೆಯ ತ್ವರಿತಗತಿ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೋಡಲ್ ಅಧಿಕಾರಿಗಳಾದ ಡಾ. ಸತೀಶ್ ವಿ.ಎಸ್. ಮಾತನಾಡಿ, ವಾಜಪೇಯಿ ಆರೋಗ್ಯಶ್ರೀ ಯೋಜನೆ ಯಿಂದ, ಆರೋಗ್ಯ ಕರ್ನಾಟಕ ಯೋಜನೆ, ಅಲ್ಲಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಾಗಿ ನಡೆದು ಬಂದ ರೀತಿ ಹಾಗೂ ಯೋಜನೆಯಲ್ಲಿ ೨೦೧೮ ರಲ್ಲಿ ಸರಾಸರಿ ತಿಂಗಳಿಗೆ ೫೦ ಜನರನ್ನು ಯೋಜನೆಯಲ್ಲಿ ನೋಂದಣಿ ಮಾಡಿ ಉಚಿತ ಚಿಕಿತ್ಸೆ ನೀಡಿರುವುದು ಹಾಗೂ ಪ್ರಸ್ತುತ ತಿಂಗಳಿಗೆ ಸಂಸ್ಥೆಯಲ್ಲಿ ಸರಾಸರಿ ೩೫೦೦ ರಿಂದ ೪೦೦೦ ರೋಗಿಗಳಿಗೆ ಯೋಜನೆಯ ಮುಖಾಂತರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಸಂಸ್ಥೆಯ ಶುಶ್ರೂಷಕ ಅಧೀಕ್ಷಕರು, ಯೋಜನೆಯ ಪಲಾನುಭವಿಗಳು, ವೈದ್ಯರು, ನರ್ಸಿಂಗ್ ಆಫೀಸರ್ಗಳು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸಿಬ್ಬಂದಿಗಳು, ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು, ಸುವರ್ಣ ಆರೋಗ್ಯ ಟ್ರಸ್ಟ್ ಜಿಲ್ಲಾ ಸಂಯೋಜಕರು, ಆರೋಗ್ಯ ಮಿತ್ರರು ಭಾಗವಹಿಸಿದ್ದರು.