ಸೋಮವಾರಪೇಟೆ, ಸೆ. ೨೭: ತಾಲೂಕಿನ ಹಿಂದೂ ಮಲಯಾಳ ಸಮಾಜದ ವತಿಯಿಂದ ಅಕ್ಟೋಬರ್ ೧ ರಂದು ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಓಣಂ ಉತ್ಸವ ಆಚರಣೆ ನಡೆಯಲಿದೆ ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ವಿ.ಎಂ. ವಿಜಯ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೬.೪೫ ರಿಂದ ಸಂಜೆ ೭.೩೦ ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಾರಂಭದಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ೯ಕ್ಕೆ ಪಟ್ಟಣದ ಮುತ್ತಪ್ಪ ದೇವಾಲಯದ ಬಳಿಯಿಂದ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಓಣಂ ಘೋಷ ಮೆರವಣಿಗೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮಿ ಮತ್ತು ಕೇರಳ ಕಾಂಞAಗಾಡ್ ಗೃಹಸ್ಥಾಶ್ರಮದ ಗಂಗಾಜೀ ನಾಯರ್ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಸಂಸದರು ಪಾಲ್ಗೊಳ್ಳಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಮಲಯಾಳಂ ನಟ ರಂಜಿತ್ ಚಾಲಾಕುಡಿ ಅವರಿಂದ ನಾಡಂಪಾಟ್ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಸಾಧಕರಿಗೆ ಸನ್ಮಾನ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮಾಜ ಬಾಂಧವರಿಗೆ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ ೯೪೪೮೨೪೬೦೬೧ ಅಥವಾ ೮೮೬೧೫೫೦೪೪೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಗೋಷ್ಠಿಯಲ್ಲಿ ಓಣಂ ಉತ್ಸವ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮುರಳಿ, ಖಜಾಂಚಿ ಎನ್.ಎನ್. ದಯಾನಂದ್, ಉಪಾಧ್ಯಕ್ಷರುಗಳಾದ ಮಾಲಂಬಿ ಗಂಗಾಧರ್, ಎನ್.ಆರ್. ಅಜೀಶ್ ಕುಮಾರ್ ಇದ್ದರು.