ಮಡಿಕೇರಿ, ಸೆ. ೨೭: ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆ ಸಂದರ್ಭ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬAಧ ಹೊರಡಿಸಿದ ಆದೇಶ ಕೇವಲ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನಿರಾ ಮೈನಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆಯಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ೧೦ ಕೋಟಿ ಹಣ ನೀಡಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಸುಳ್ಳು ಎಂದು ಮೈನಾ ಆಪಾದಿಸಿದರು.
ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ ೧೭ ರಂದು ಬಜೆಟ್ ಮಂಡನೆ ಮಾಡಿದ್ದರು. ಅದರಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಪ್ರಸ್ತಾಪ ಇರಲಿಲ್ಲ. ಬದಲಾಗಿ ಮಾರ್ಚ್ ೨೦ ರಂದು ಚುನಾವಣೆ ಘೋಷಣೆಗೆ ಕ್ಷಣ ಗಣನೆ ಆರಂಭವಾದ ಸಂದರ್ಭದಲ್ಲಿ ಕೇವಲ ಆದೇಶ ಹೊರಡಿಸಿದ್ದರು. ಇದು ಕೇವಲ ಚುನಾವಣೆ ಗಿಮಿಕ್ ಆಗಿತ್ತು. ಅದರ ಅರಿವು ಇದ್ದ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರುಗಳು ತಮ್ಮ ಚುನಾವಣೆ ಪ್ರಚಾರದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ. ಹಾಗಾಗಿ ಇದು ಬೋಗಸ್ ಆದೇಶ ಎಂದು ಮೈನಾ ಹೇಳಿದರು. ಯಾವುದೇ ಅಭಿವೃದ್ಧಿ ನಿಗಮ ಘೋಷಣೆಯಾಗುವಾಗ ಕಂಪೆನಿ ಕಾಯ್ದೆ ೨೦೧೩ ಸೆಕ್ಷನ್ ೭ರ ಅನ್ವಯ ನೋಂದಾಯಿಸಿ ಆರ್ಥಿಕ ಇಲಾಖೆಯ ಒಪ್ಪಿಗೆ, ಅನುದಾನದ ಬಿಡುಗಡೆ, ಲೆಕ್ಕಶೀರ್ಷಿಕೆ, ವ್ಯವಸ್ಥಾಪಕ ನಿರ್ದೇಶಕರು, ಕಚೇರಿ ಸಿಬ್ಬಂದಿ ಮುಂತಾದವುಗಳನ್ನು ಉಲ್ಲೇಖಿಸಿ ಆದೇಶಿಸಲಾಗುತ್ತದೆ. ಆದರೆ ಕೊಡವ ಅಭಿವೃದ್ಧಿ ನಿಗಮ ಸಂಬAಧ ಕೇವಲ ಆದೇಶದ ಪ್ರತಿ ಮಾತ್ರ ಇದ್ದು, ಅದರಲ್ಲಿ ಬೇರೆ ಯಾವುದೇ ಉಲ್ಲೇಖಗಳಿರಲಿಲ್ಲ.
೧೩-೧೧-೨೦೨೦ರಲ್ಲಿ ೫೦ ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ಮರಾಠ ಅಭಿವೃದ್ಧಿ ಪ್ರಾಧಿಕಾರ, ೨೩-೧೧-೨೦೨೦ರಲ್ಲಿ ೫೦೦ ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ೧೭-೭-೨೦೨೧ರಲ್ಲಿ ೫೦೦ ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ಒಕ್ಕಲಿಗರ ನಿಗಮದ ಆದೇಶದ ಪ್ರತಿಗಳನ್ನು ಪ್ರದರ್ಶಿಸಿದ ತೆನ್ನಿರ ಮೈನಾ ೨೦-೩-೨೦೨೩ ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಹೊರಡಿಸಿದ ಕೊಡವ ಅಭಿವೃದ್ಧಿ ನಿಗಮದ ಆದೇಶವನ್ನು ಸಂಸದರು ತುಲನೆ ಮಾಡಲಿ ಎಂದು ನುಡಿದರು.
ಮಾಜಿ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಮಾತನಾಡಿ, ಸಮುದಾಯದ ಕಾರ್ಯಕ್ರಮದಲ್ಲಿ ಸಮುದಾಯದ ಏಳಿಗೆಯ ಬಗ್ಗೆ ಮಾತನಾಡದೆ ರಾಜಕೀಯ ಭಾಷಣ ಮಾಡಿದ ಸಂಸದ ಪ್ರತಾಪ್ ಸಿಂಹ ಅವರ ನಡೆ ವಿಷಾದನೀಯ ಎಂದರು.
ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.