ಮಡಿಕೇರಿ, ಸೆ. ೨೭: ಕನ್ನಡಸಿರಿ ಸ್ನೇಹ ಬಳಗ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ತಾ. ೨೮ ರಂದು (ಇಂದು) ‘ಸಿರಿ ಸಂಭ್ರಮ’ ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕುಶಾಲನಗರದ ನಿಸರ್ಗಧಾಮದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಪನ್ಯಾಸಕಿ ಅನುರಾಧ ಕುರುಂಜಿ ಉದ್ಘಾಟಿಸಲಿದ್ದು, ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಸಂಸ್ಥೆ ಪೂರ್ವಾಧ್ಯಕ್ಷ ಎಂ.ಡಿ. ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಲಾ ಶಿಕ್ಷಕ ಉ.ರಾ. ನಾಗೇಶ್ ಶರ್ಮಿಳ ಉಮೇಶ್ ಬರೆದ ‘ಬಾಗಿಲು ಮುಚ್ಚಿವೆ ಕವನಗಳು’, ‘ಮೌನ ಮಾತಾದಾಗ’ ಕೃತಿ ಬಿಡುಗಡೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವಿಜಯ ವಿಷ್ಣುಭಟ್, ವಿಶೇಷ ಆಹ್ವಾನಿತರಾಗಿ ನಿವೃತ್ತ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಭಾಗವಹಿಸಲಿದ್ದು, ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ದಿನಪತ್ರಿಕೆ ಉಪಸಂಪಾದಕ ಕುಡೆಕಲ್ಲು ಸಂತೋಷ್ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.