ಮಡಿಕೇರಿ, ಸೆ. ೨೭: ವೀರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆ ಯಲ್ಲೇ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರು ತಿರುಗೇಟು ನೀಡಿರುವ ಕಾರಣಕ್ಕೆ ರಾಜಕೀಯ ಜಿದ್ದು ಸಾಧಿಸುತ್ತಿರುವ ವಲಸೆ ರಾಜಕಾರಿಣಿ, ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಅವರು ಹತಾಶರಾಗಿ ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕ್ಷೇತ್ರದ ಪ್ರಜ್ಞಾವಂತ ಮತದಾರರು ಎರಡು ಬಾರಿ ಪ್ರತಾಪ್ ಸಿಂಹ ಅವರನ್ನು ಸಂಸದರನ್ನಾಗಿ ಚುನಾಯಿಸಿ ಕಳುಹಿಸಿರುವುದೇ ಸಂಸದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಸಂಸದರು, ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಸಂಕೇತ್ ಪೂವಯ್ಯ

(ಮೊದಲ ಪುಟದಿಂದ) ಅವರು ಪರಿಶೀಲಿಸಿ ಎಷ್ಟು ಕೋಟಿ ಅನುದಾನ ತಂದಿದ್ದಾರೆ ಎಂಬ ಬಗ್ಗೆ ವಾಸ್ತವ ಅರಿತು ನಂತರ ಆರೋಪ ಮಾಡಲಿ. ಕಾಂಗ್ರೆಸಿಗರು ತಮ್ಮ ರಾಜಕೀಯ ಕಾರಣಕ್ಕಾಗಿ ಸಂಸದರ ಮೇಲೆ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸಲೇಯತ್ನಿಸುವುದು ಬೇಡ. ಕೊಡಗಿನ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದಿದ್ದಾರೆ.

ದೇಶ ಬಿಟ್ಟು ಹೋದ ವಿಜಯಮಲ್ಯ ಅವರ ಜನತಾ ಪಕ್ಷದಿಂದ ಟಿಪುö್ಪವಿನ ಖಡ್ಗವನ್ನು ತಲೆ ಮೇಲೆ ಹೊತ್ತು ಚುನಾವಣೆಗೆ ಹೋದಾಗ ಕೊಡಗಿನ ಜನ ಪಾಠ ಕಲಿಸಿರುವುದನ್ನು ಮರೆತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಜೆ.ಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದಾಗ ಪ್ರಜ್ಞಾವಂತ ಮತದಾರ ಹೀನಾಯವಾಗಿ ಸೋಲಿಸಿರುವುದನ್ನು ಮರೆತಂತಿದೆ. ನಂತರ ಪಕ್ಷಕ್ಕೆ ಕೈ ಕೊಟ್ಟು ಸೋನಿಯ ಗಾಂಧಿಯವರ ಕಾಲಿಗೆ ನಮಸ್ಕರಿಸುತ್ತಿರುವ ಸಂಕೇತ್ ಪೂವಯ್ಯ ಅವರಿಗೆ ಬಿಜೆಪಿ ಸಂಸದರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ರಾಬಿನ್ ದೇವಯ್ಯ ಲೇವಡಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಕೊಡಗಿಗೆ, ಕೊಡವ ಅಭಿವೃದ್ಧಿ ನಿಗಮಕ್ಕೆ ಹಣ ನೀಡಿರುವುದು ಸುಳ್ಳು ಎಂದು ಹೇಳಿಕೆ ನೀಡಲಾಗಿದೆ, ಅಲ್ಲದೆ ಶಾಸಕ ಪೊನ್ನಣ್ಣ ಅವರು ಕೂಡ ಇದನ್ನೇ ಹೇಳುತ್ತಿದ್ದಾರೆ. ಹಾಗಾದರೆ ೨೦೨೨ನೇ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಸÀರ್ಕಾರ ೧೦ ಕೋಟಿ ರೂ. ಅನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಿ, ಆ ಹಣದಲ್ಲಿ ೬ ಕೋಟಿ ಫೆಡರೇಶನ್ ಆಫ್ ಕೊಡವ ಸಮಾಜಕ್ಕೆ, ೩ ಕೋಟಿ ರೂ. ವಿವಿಧ ಕೊಡವ ಸಮಾಜಗಳ ಅಭಿವೃದ್ಧಿಗೆ, ೧ ಕೋಟಿ ರೂ.ಗಳನ್ನು ಕೊಡವ ಮತ್ತು ಅಮ್ಮ ಕೊಡವ ಟ್ರಸ್ಟ್ಗೆ ನೀಡಿ ಇದಕ್ಕೆ ಆಡಳಿತಾತ್ಮಕ ಒಪ್ಪಿಗೆಯೊಂದಿಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿ, ನಿರ್ಮಿತಿ ಕೇಂದ್ರಕ್ಕೆ ಹಣ ರವಾನೆಯಾಗಿರುವುದನ್ನು ಯಾಕೆ ತಡೆ ಹಿಡಿದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಕೊಡವ ಅಭಿವೃದ್ಧಿ ನಿಗಮ ೨೦೨೩ರ ಸಾಲಿನ ಬಜೆಟ್‌ನ ನಂತರ ಘೋಷಣೆಯಾಗಿದೆ. ೨೦೨೩ ಮಾ.೧೮ ರಂದು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ನಿಗಮ ಘೋಷಣೆ ಮಾಡಿದ್ದು, ಈಗಿರುವ ಸರ್ಕಾರ ಹೆಚ್ಚಿನ ಹಣ ನೀಡಬೇಕು ಎಂದು ತಿಳಿಸಿದ್ದಾರೆ.

ಜೈನಿ ಹೇಳಿಕೆ

ಕರ್ನಾಟಕದ ಸಂಸತ್ ಸದಸ್ಯರುಗಳಲ್ಲೇ ಅನುದಾನ ಬಳಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಕೊಡಗಿನ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಕಳೆದ ಚುನಾವಣೆ ಸಂದರ್ಭದಲ್ಲಿ ಜೆ.ಡಿ.ಎಸ್. ಬಿಟ್ಟು ಯಾವುದೋ ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್ ಸೇರಿ ಈಗ ಎಂಎಲ್‌ಸಿ ಕನಸು ಕಾಣುತಿರುವ ಸಂಕೇತ್ ಪೂವಯ್ಯರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕೊಡಗು ಬಿಜೆಪಿ ವಕ್ತಾರ ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಸಿಂಹ ಅವರ ನೇರ ಮತ್ತು ಸತ್ಯದ ನುಡಿಯಿಂದ ಮುಖಭಂಗಕ್ಕೆ ಒಳಗಾಗಿರುವ ಕೊಡಗಿನ ಕಾಂಗ್ರೆಸ್ ಮತ್ತು ಅದರ ಸಮಯ ಸಾಧಕ ವಕ್ತಾರ ಸಂಕೇತ್ ಪೂವಯ್ಯ ಗಲಿಬಿಲಿಗೊಂಡಿದ್ದು, ಸುಳ್ಳು ಆರೋಪಗಳನ್ನು ಸಂಸದ ಪ್ರತಾಪ್ ಸಿಂಹ ರವರ ಮೇಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದಿರುವ ಸಂಕೇತ್ ಅವರು ಸಂಸದ ಪ್ರತಾಪ್ ಸಿಂಹ ಅವರ ವಿಶೇಷ ಪ್ರಯತ್ನದ ಮೂಲಕ ಕೇಂದ್ರದ ಎನ್‌ಡಿಆರ್‌ಎಫ್‌ನಿಂದ ಕೊಡಗಿನ ಸುಮಾರು ೪೪ ಸಾವಿರ ಕಾಫಿ ಬೆಳೆಗಾರರಿಗೆ ೧೩೪ ಕೋಟಿ ಪರಿಹಾರವನ್ನು ಕನಿಷ್ಟ ೫೬ ಸಾವಿರದವರೆಗೆ ನೀಡಿರುವುದು ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಇದರ ಜೊತೆಯಲ್ಲೇ ಕರಿಕೆ, ಸಂಪಾಜೆ, ಚೆಂಬು, ಪೆರಾಜೆ ಭಾಗಗಳಲ್ಲಿ ಹಳದಿ ರೋಗಕ್ಕೂ ಮೊದಲ ಬಾರಿಗೆ ಪರಿಹಾರ ನೀಡಿರುವುದು ಸಂಕೇತ್ ಅವರಿಗೆ ತಿಳಿದಿರಲಿ ಎಂದು ಹೇಳಿದ್ದಾರೆ.

ಮುಂದೆ ಲೋಕಸಭೆ ಚುನಾವಣೆ ಇರುವುದನ್ನ ಗಮನಿಸಿ ಆನೆ ಹಾವಳಿ ಬಗ್ಗೆ ಪ್ರಸ್ತಾಪ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿ ಸರ್ಕಾರವಿದ್ದಾಗ ರೈಲ್ವೆ ಬ್ಯಾರಿಕೆಡ್ ನಿರ್ಮಾಣ, ಕಂದಕಗಳ ನಿರ್ಮಾಣ, ನಾಗರಹೊಳೆ ವ್ಯಾಪ್ತಿಯಲ್ಲಿ ಸೋಲಾರ್ ಫೆನ್ಸ್ ನಿರ್ಮಾಣ ಮಾಡಿದ್ದು, ಇದೆಲ್ಲಾ ಸಂಕೇತ್ ಪೂವಯ್ಯರಿಗೆ ಮರೆತೇ ಹೋಯಿತೇ ಎಂದು ಬಿಜೆಪಿ ವಕ್ತಾರ ಛೇಡಿಸಿದ್ದಾರೆ.