ಕೂಡಿಗೆ, ಸೆ. ೨೭: ಬೀಟೆಮರ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಹಚ್ಚಿದ ಅರಣ್ಯ ಇಲಾಖೆ ಓರ್ವ ಆರೋಪಿಯನ್ನು ವಾಹನ ಹಾಗೂ ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಚಿಕ್ಕತ್ತೂರು ಗ್ರಾಮದ ಸಿ.ಎಂ.ಮೋನೇಶ್ ಬಂಧಿತ ಆರೋಪಿ.

ಮಂಗಳವಾರ ರಾತ್ರಿ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ತಪಾಸಣೆ ಪರಿಶೀಲನೆ ಸಂದರ್ಭ ಹಾರಂಗಿ-ಚಿಕ್ಕತ್ತೂರು ಕಡೆಯಿಂದ ಬಂದ ಟ್ರಾö್ಯಕ್ಟರ್ ವೇಗವಾಗಿ ನಿಲ್ಲಿಸದೇ ಹೋದ ಸಂದರ್ಭ ಇಲಾಖಾ ವಾಹನದಲ್ಲಿ ಟ್ರಾö್ಯಕ್ಟರ್‌ನ್ನು ಬೆನ್ನಟ್ಟಿ ಅದರಲ್ಲಿದ್ದ ಒಬ್ಬಾತನನ್ನು ವಶಕ್ಕೆ ಪಡೆಯಲಾಯಿತು. ಉಳಿದ ೩ ಜನ ಓಡಿ ತಲೆ ಮರೆಸಿಕೊಂಡಿದ್ದಾರೆ. ಬಂಧಿತನನ್ನು ವಿಚಾರಿಸಿದಾಗ ಅತ್ತೂರು ಮೀಸಲು ಅರಣ್ಯದಿಂದ ಒಂದು ಬೀಟೆ ಮರವನ್ನು ತುಂಡು ಮಾಡಿ ಟ್ರಾö್ಯಕ್ಟರ್‌ಗೆ ತುಂಬಿಸಿ ಕುಶಾಲನಗರ ಕಡೆಗೆ ತರುತ್ತಿರುವುದಾಗಿ ತಿಳಿದುಬಂದಿದೆ. ಚಿಕ್ಕತ್ತೂರಿನ ದಿಲೀಪ್, ಗಿರೀಶ್ ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ.

ಟ್ರಾö್ಯಕ್ಟರ್ (ಏಂ-೫೫ ೧-೮೫೧೦) ಮತ್ತು ಅದರಲ್ಲಿದ್ದ ೯ ಬೀಟೆ ನಾಟಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿ.ಎಫ್.ಓ. ಪೂವಯ್ಯ, ಆರ್.ಎಫ್.ಓ. ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ, ಉಪ ವಲಯ ಅರಣ್ಯ ಅಧಿಕಾರಿ ಅಂತೋಣಿ ಡಿಸೋಜ, ಅರಣ್ಯ ರಕ್ಷಕ ಮಂಜೇಗೌಡ, ದಿನೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.