ಮಡಿಕೇರಿ, ಸೆ. ೨೭: ವೀರಾಜಪೇಟೆ ದೇವಣಗೇರಿ ಬಿ.ಸಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೀರಾಜಪೇಟೆ ರೋಟರಿ ವತಿಯಿಂದ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟೀರ ಐ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ರೋಟರಿ ಸಂಸ್ಥೆಯ ಅಧ್ಯಕ್ಷ ಮುಕ್ಕಾಟೀರ ಪೂವಣ್ಣ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಕೀಲ ಮಾದಪ್ಪ, ರೋಟೇರಿಯನ್ ರಾಬಿನ್ ಅವರು ಭಾಗವಹಿಸಿದ್ದರು. ಮಾದಪ್ಪ ಅವರು ಮಾತನಾಡಿ, ಗುರುತಿನ ಚೀಟಿಯ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಪಠ್ಯಕ್ರಮ ಮತ್ತು ಆಟೋಟಗಳಲ್ಲಿ ಆಸಕ್ತಿ ಹೊಂದಿರಬೇಕು. ಸಮಾನತೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ಎಲ್ಲರೂ ಕೂಡ ಈ ಗುರುತಿನ ಚೀಟಿಯ ಮಹತ್ವವನ್ನು ಅರಿತು ಉಪಯೋಗಿಸುವಂತೆ ತಿಳಿಸಿಕೊಟ್ಟರು.

ರೋಟರಿ ಸಂಸ್ಥೆಯ ಅಧ್ಯಕ್ಷ ಪೂವಣ್ಣ ಅವರು ಮಾತನಾಡಿ, ರೋಟರಿ ಸಂಸ್ಥೆ ಈ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಗುರುತಿನ ಚೀಟಿಯನ್ನು ವಿತರಿಸುತ್ತಿರುವ ಬಗ್ಗೆ ಮಾಹಿತಿ ಇತ್ತರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಕ್ಕಾಟೀರ ಐ. ನಾಣಯ್ಯ ಅವರು ಮಾತನಾಡಿ, ಸುಮಾರು ೧೮ ವರ್ಷಗಳಿಂದ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ರೋಟರಿ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ರಾಬಿನ್, ಮುಖ್ಯ ಶಿಕ್ಷ ಹೆಚ್.ಡಿ. ಲೋಕೇಶ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಕಿ ವೈ. ಪ್ರಮೀಳಾಕುಮಾರಿ ಹಾಗೂ ವಂದನೆಯನ್ನು ಶಿಕ್ಷಕಿ ಎ.ಸಿ. ಸುನಿತ ನೆರವೇರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದರು.