ಮಡಿಕೇರಿ, ಸೆ. ೨೭: ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಬಂಧನೆಗಳ ಪ್ರಕಾರ ಕಾಫಿ ತೋಟಗಳು ಮತ್ತು ಜಮ್ಮಾ ಜಮೀನುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವಂತಿಲ್ಲ. ಆದರೆ ಕೊಡಗಿನಲ್ಲಿ ಭೂ ಕಂದಾಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಮಾಜಿ ಅಧ್ಯಕ್ಷ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಪ್ರಮುಖ ಕರ್ನಲ್ ಸಿ.ಪಿ. ಮುತ್ತಣ್ಣ ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂಬAಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಭೂ ಕಂದಾಯ ಕಾಯ್ದೆ ನಿಬಂಧನೆಗಳಿಗೆ ವಿರುದ್ಧವಾಗಿ ಕೊಡಗಿನಲ್ಲಿ ಕಾರ್ಯನಿರ್ವಹಿಸಿದ ಈ ಹಿಂದಿನ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆಗಳನ್ನು ಅನುಮೋದಿಸಿದ್ದಾರೆ ಎಂದು ಗಮನಿಸಿದೆ.
ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದರೂ ಜಿಲ್ಲೆಯಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂದು ಅವರು ದೂರಿದರು.
ಕೊಡಗಿನ ವಿವಿಧೆಡೆ ಪರಿಸರ ಹಾಳು ಮಾಡುವ ಯೋಜನೆಗಳು ಬರುತ್ತಿದ್ದು, ನಗರೀಕರಣ ಮಿತಿ ಮೀರಿ ನಡೆದರೆ ವನ್ಯ ಪ್ರಾಣಿಗಳಿಗೆ ತೊಂದರೆ ಆಗಲಿದ್ದು, ಅವುಗಳಿಂದ ಜನತೆ ಕೂಡ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು. ಜಿಲ್ಲೆಯ ಹಲವೆಡೆ ರೆಸಾರ್ಟ್ಗಳ ನಿರ್ಮಾಣಕ್ಕೆ ಗ್ರಾ.ಪಂ.ಗಳು ಅನುಮತಿ ನೀಡುತ್ತಿವೆ. ಈ ರೀತಿ ಕಾನೂನುಬಾಹಿರವಾಗಿ ಅನುಮತಿ ಕೊಡುವುದು ಮುಂದುವರಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಮುತ್ತಣ್ಣ ಎಚ್ಚರಿಕೆಯಿತ್ತರು.
ಕೊಡಗು ರಕ್ಷಣಾ ವೇದಿಕೆ ಉಪಾಧ್ಯಕ್ಷ ಕೆದಕಲ್ ಗೋಪಿನಾಥ್, ಕೆದಕಲ್ ಗ್ರಾ.ಪಂ. ಸದಸ್ಯ ಶಿವಶಂಕರ್ ಮಾತನಾಡಿ, ಕೊಡಗಿನ ಪರಿಸರ ಉಳಿಯದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ ಎಂದು ಹೇಳಿದರು. ಉಳುವಾರನ ಗಯ, ಉಳುವಾರನ ಪ್ರಜ್ವಲ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.