ಕೂಡಿಗೆ, ಸೆ. ೨೬: ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಸಮಾಧಾನದ ಹಿನ್ನೆಲೆ ೬ ಮಂದಿ ಸದಸ್ಯರು ಮಾಸಿಕ ಸಭೆಯಲ್ಲಿ ಸಭಾತ್ಯಾಗ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಗ್ರಾ.ಪಂ. ಅಧ್ಯಕ್ಷೆ ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಈ ಘಟನೆ ನಡೆದಿದೆ.

ಸಭೆಯ ಆರಂಭಗೊಳ್ಳುತ್ತಿದ್ದAತೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ್ ನೇತೃತ್ವದಲ್ಲಿ ಸದಸ್ಯರಾದ ನಾರಾಯಣ, ತನುಕುಮಾರ್, ರತ್ನಮ್ಮ, ಮಹದೇವ, ಪುಟ್ಟಲಕ್ಷಿö್ಮ ಸಭೆಯಿಂದ ಹೊರ ನಡೆದರು. ಅಧ್ಯಕ್ಷೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಟೆಂಡರ್ ಕರೆಯದೆ ಬಲ್ಬ್ ಖರೀದಿ ಮಾಡಲಾಗಿದೆ, ಕಾಮಗಾರಿಗಳ ಬಗ್ಗೆ ಸದಸ್ಯರ ಗಮನಕ್ಕೆ ತರುತ್ತಿಲ್ಲ, ಗ್ರಾಮ ಪಂಚಾಯಿತಿಗೆ ಸೇರಿದ ಜಾಗ ಉಳಿಸಿಕೊಳ್ಳಲು ಕ್ರಮವಹಿಸಿಲ್ಲ, ಸ್ವಚ್ಛತಾ ಕಾರ್ಯ ಕಾಮಗಾರಿಗೆ ಜಮಾ ಖರ್ಚು ವಿವರದಲ್ಲಿ ಎರಡೆರಡು ಬಾರಿ ಉಲ್ಲೇಖಿಸಲಾಗಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಉದ್ದಟತನದಿಂದ ವರ್ತಿಸುತ್ತಾರೆ ಎಂದು ಆರೋಪಿಸಿದ ಸದಸ್ಯರು ಸಭಾತ್ಯಾಗದ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಅರುಣಕುಮಾರಿ, ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುವ ಮುನ್ನವೇ ಆರು ಸದಸ್ಯರು ಏಕಾಏಕಿ ಸಭಾತ್ಯಾಗ ಮಾಡಿದ್ದಾರೆ. ಮನವೊಲಿಕೆಗೆ ಸ್ಪಂದಿಸದೆ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಅವರ ಆರೋಪಗಳಲ್ಲಿ ನೈಜಾಂಶ ಇದ್ದರೆ ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದರು. ಸಭೆಯಲ್ಲಿ ಪ್ರಮುಖವಾಗಿ ೧೫ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ, ಸ್ವಚ್ಛತೆಗೆ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆಗಳು ನಡೆದವು. ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳ ಬಗ್ಗೆ ಅಭಿವೃದ್ಧಿ ಅಧಿಕಾರಿ ಅರುಣ ಭಾಸ್ಕರ್ ಸಭೆಯ ಗಮನಕ್ಕೆ ತಂದರು. ಅವುಗಳ ವಿಲೇವಾರಿ ಕ್ರಮವಾಗಿ ಕೈಗೊಳ್ಳುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಲತಾ, ಸದಸ್ಯರಾದ ಹೆಚ್.ಎಸ್. ಶಿವನಂಜಪ್ಪ, ಹೆಚ್. ವಿ. ಚಂದ್ರಶೇಖರ್ ಜೋಗಿ, ಹೆಚ್. ಜೆ.ಪರಮೇಶ, ಕವಿತ, ಪವಿತ್ರ, ಹೆಚ್.ವಿ. ಯಶಸ್ವಿ ಹಾಜರಿದ್ದರು.