ಮಡಿಕೇರಿ, ಸೆ. ೨೬ : ಮಡಿಕೇರಿಯಲ್ಲಿ ೨೦೧೩ರಲ್ಲಿ ಪ್ರಾರಂಭಗೊAಡ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡವೇ ಇಲ್ಲವಾಗಿದ್ದು ಯುವ ಒಕ್ಕೂಟ ಭವನದಲ್ಲಿ ಸೌಲಭ್ಯಗಳ ಕೊರತೆ ನಡುವೆಯೇ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಸಬಲೀಕರಣ ಉದ್ದೇಶಿತ ಮಹಿಳಾ ಕಾಲೇಜು ಹೆಚ್ಚಾಗಿ ಗ್ರಾಮೀಣ ಭಾಗಗಳಿಂದಲೇ ಬಹುತೇಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅಭಿವೃದ್ಧಿಗೆಂದು ಸ್ಥಾಪನೆಯಾಗಿದೆಯಾದರೂ ಸ್ವಂತ ಕಟ್ಟಡದಿಂದ ವಂಚಿತವಾಗಿರುವುದು ವಿಪರ್ಯಾಸ.
ಅರ್ಧದಲ್ಲಿ ನಿಂತಿರುವ ಕಾಮಗಾರಿ
ನೂತನ ಕಟ್ಟಡ ನಿರ್ಮಾಣಕ್ಕೆ ಈ ಹಿಂದಿನ ಸರಕಾರವು ರೂ.೨ ಕೋಟಿ ಮಂಜೂರು ಮಾಡಿತ್ತು. ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಯೇ ಜಾಗವನ್ನು ಕೂಡ ಗುರುತಿಸಲಾಗಿತ್ತು. ೨೦೨೧ರ ಡಿಸೆಂಬರ್ನಲ್ಲಿ ಮೊದಲನೆಯ ಹಂತದ ಕಾಮಗಾರಿಗೆ ರೂ.೧ ಕೋಟಿ ಬಿಡುಗಡೆಯಾಗಿ ಶೇ.೭೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆಯಾದರೂ ಬಾಕಿ ಹಣ ಬಿಡುಗಡೆಯಾಗದೆ ವಿದ್ಯಾರ್ಥಿಗಳು ಶಾಶ್ವತ ಕಾಲೇಜು ಕಟ್ಟಡದಿಂದ ವಂಚಿತರಾಗಿದ್ದಾರೆ. ಈಗಿರುವ ಕಟ್ಟಡದಲ್ಲಿ ಸೌಲಭ್ಯಗಳ ಕೊರತೆ ಇದ್ದು, ಕಿರಿದಾದ ಕ್ಯಾಂಪಸ್ ಜಾಗದಲ್ಲಿಯೇ ಪಠ್ಯಕ್ರಮದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ಕಾಲೇಜಿನ ಆಡಳಿತ ನಿಭಾಯಿಸುವ ಪರಿಸ್ಥಿತಿ ಇದೆ. ಕಾಲೇಜು ಪ್ರವೇಶಾತಿಗೆ ಬರುವ ಕೆಲ ವಿದ್ಯಾರ್ಥಿಗಳು ಕ್ಯಾಂಪಸ್ ರಹಿತ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳಲು ಹಿಂಜರಿಕೆ ಹಾಕುತ್ತಿದ್ದಾರೆ ಎಂದು ಕಾಲೇಜಿನ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.
- ಪ್ರಜ್ಞಾ ಜಿ.ಆರ್.