ಸಿದ್ದಾಪುರ, ಸೆ. ೨೬: ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫÀಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ೨೭ ಕಾಡಾನೆಗಳನ್ನು ತೋಟದ ಕಾರ್ಮಿಕರೇ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಲ್ಪಿ ಕಾಫಿ ತೋಟದಲ್ಲಿ ಹಾಡಹಗಲಿನಲ್ಲೇ ಮರಿಯಾನೆಗಳೊಂದಿಗೆ ೨೭ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದವು. ತೋಟ ಕೆಲಸಕ್ಕೆ ತೆರಳುವ ಮುನ್ನ ಇಬ್ಬರು ಕಾರ್ಮಿಕರು ಕಾಡಾನೆಗಳ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ತೆರಳಿದ ಸಂದರ್ಭ ಕಾರ್ಮಿಕರಾದ ಪವನ್, ಗಣೇಶ್ ಎಂಬವರಿಗೆ ಕಾಡಾನೆಗಳ ಹಿಂಡು ಕಂಡಿವೆ.
ತಕ್ಷಣ ಇತರ ಕಾರ್ಮಿಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟ ಕೆಲಸಕ್ಕೆ ಬಂದ ರಘ, ಕುಶ, ಕಿಟ್ಟಿ, ಬಿಕಾಶ್ ಸೇರಿದಂತೆ ಇತರ ಕಾರ್ಮಿಕರು ಕಾಡಾನೆಗಳ ಗುಂಪನ್ನು ಕಂಡು ಭಯಭೀತರಾದರು. ಕಾಡಾನೆಗಳ ಹಾವಳಿಯಿಂದ ಒಂದು ದಿನದ ಕೆಲಸ ಇಲ್ಲದಂತಾಗುತ್ತದೆ ಎಂದು ಭಾವಿಸಿ ಧೈರ್ಯ ತೋರಿದ ಕಾರ್ಮಿಕರು ಮರದ ಮೇಲೆ ಹತ್ತಿ ಕಿರುಚುವ ಶಬ್ದ ಮಾಡುವ ಮೂಲಕ ಬೇರ್ಪಟ್ಟ ಆನೆಗಳನ್ನು ಒಂದುಗೂಡಿಸಿ ಶಿಲ್ಪಿ ಕಾಫಿ ತೋಟದಿಂದ ಚಿಕ್ಕನಹಳ್ಳಿ ಮಾರ್ಗವಾಗಿ ಒಂದು ಕಿಲೋಮೀಟರ್ ವರೆಗೆ ಆನೆಗಳನ್ನು ಹಿಮ್ಮೆಟ್ಟಿಸಿಕೊಂಡು ಸಮೀಪದ ದುಬಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಾನೆ ಹಾವಳಿ ತಡೆಗಟ್ಟಲು ಒತ್ತಾಯ
ಆಹಾರ ಅರಸಿ ಬಂದ ಕಾಡಾನೆಗಳು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫÀಸಲುಗಳನ್ನು ತುಳಿದು ತಿಂದು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾಡು ಪ್ರಾಣಿಗಳ ಹಾವಳಿಯಿಂದ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕಾರ್ಮಿಕ ಸಂಘಟನೆಯ ಮುಖಂಡ ರಮೇಶ್ ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಕಾಟಚಾರಕ್ಕೆ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡಿದರು ಏನು ಪ್ರಯೋಜನವಾಗುತ್ತಿಲ್ಲ. ಅರಣ್ಯದಂಚಿನಲ್ಲಿ ಯಾವುದೇ ತಡೆಯಿಲ್ಲದೆ ಆನೆಗಳು ಬಂದು ಹೋಗುತ್ತಿವೆ.
ಬಹುತೇಕ ಕಡೆಗಳಲ್ಲಿ ಸೋಲಾರ್, ರೈಲ್ವೆ ಕಂಬಿ, ಕಂದಕಗಳು ಇಲ್ಲದೆ ಆನೆಗಳು ಕಾಡಿನಿಂದ ಬಂದು ಕಾಫಿ ತೋಟದಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿ ಮಾಡುತ್ತಿವೆ. ಕೂಡಲೇ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಮೇಶ್ ಎಚ್ಚರಿಸಿದ್ದಾರೆ.
-ಎಸ್.ಎಂ. ಮುಬಾರಕ್