ಕಣಿವೆ, ಸೆ. ೨೬: ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರೂ ೩.೯೦ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತರಗತಿ ಕೋಣೆಗಳು, ಸಭಾಂಗಣ ಹಾಗೂ ವಿವಿಧ ಕಟ್ಟಡಗಳು ಕಳಪೆ ಕಾಮಗಾರಿಯಿಂದ ಕೂಡಿರುವ ಬಗ್ಗೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
೭೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಿರುವ ತರಗತಿ ಕೋಣೆಗಳು ಬಳಕೆಗೂ ಮೊದಲೇ ಸೋರುತ್ತಿರುವ ಹಾಗೂ ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು ಹಾಗೂ ಮೇಲ್ಛಾವಣಿ ಕಳಪೆ ಕಾಮಗಾರಿಗೆ ಪ್ರತೀಕವಾಗಿವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಬರೋಬ್ಬರಿ ರೂ ೧ ಕೋಟಿ ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ರೂ. ೭೦ ಲಕ್ಷ ವೆಚ್ಚದಲ್ಲಿ ಎರಡು ಪ್ರಯೋಗಾಲಯಗಳ ಕಟ್ಟಡ ನಿರ್ಮಿಸಲಾಗಿದೆ. ರೂ. ೬೦ ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ರೂ. ೩೦ ಲಕ್ಷ ವೆಚ್ಚದಲ್ಲಿ ಎರಡು ಶೌಚಾಲಯಗಳು ಹಾಗೂ ರೂ. ೧ ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಾಮಗಾರಿಗಳನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೈಟ್ಸ್ ಎಂಬ ಹೆಸರಿನ ಸಂಸ್ಥೆಯಿAದ ನಿರ್ಮಿಸಲಾಗಿದೆ.
ಕೋಟ್ಯಂತರ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಇಲ್ಲಿನ ನೂತನ ಕೊಠಡಿಗಳ ಗೋಡೆಗಳು ಬಳಕೆಗೂ ಮೊದಲೇ ಶೀತಕ್ಕೆ ಸಿಲುಕಿ ಪಾಚಿ ಕಟ್ಟಿದಂತೆ ಗೋಚರವಾಗುತ್ತಿವೆ. ಇನ್ನು ಕೆಲವೆಡೆಗಳಲ್ಲಿ ಮೇಲ್ಛಾವಣಿಗಳಲ್ಲಿ ಬಿರುಕು ಬಿಟ್ಟಿರುವ ಚಿತ್ರಣವೂ ಕಾಣುತ್ತಿದ್ದರೆ, ಕೆಲವೆಡೆ ಬೃಹತ್ ಬಿರುಕುಗಳು ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುತ್ತಿವೆ. ಆದ್ದರಿಂದ ಸಂಬAಧಿಸಿದ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.