.

*ಸಿದ್ದಾಪುರ, ಸೆ. ೨೬: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರ ಪರವಾದ ಯೋಜನೆಗಳ ಮೂಲಕ ನಿರಂತರವಾಗಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಲೇ ಇವೆ. ಆದರೆ ಜಾರಿಗೆ ತಂದ ಯೋಜ ನೆಗಳು ಅರ್ಹ ಫಲಾನುಭವಿಗೆ ತಲುಪಿ ದೆಯೇ ಅಥವಾ ಇಲ್ಲವೇ ಎಂಬುದೇ ಪ್ರಶ್ನೆ..?

ಇದಕ್ಕೊಂದು ಸಾಕ್ಷಿ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಮಹಾತ್ಮಗಾಂಧಿ ಕಾಲೋನಿಯ ಮುನಿಯಾಂಡಿ. ಇವರಿಗೆ ಈಗ ೭೦ ವರ್ಷ, ಈ ಇಳಿವಯಸ್ಸಿನಲ್ಲೂ ಕೂಲಿ ಮಾಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪತ್ನಿ ಮೃತಪಟ್ಟಿದ್ದಾರೆ, ಪುತ್ರಿ ಯನ್ನು ವಿವಾಹ ಮಾಡಿಕೊಡಲಾಗಿದೆ, ಇರುವ ಓರ್ವ ಪುತ್ರ ವಿಶೇಷ ಚೇತನನಾಗಿದ್ದು, ಮುನಿಯಾಂಡಿಯ ಬದುಕು ಸಂಕಷ್ಟದಲ್ಲಿ ಮುಳುಗಿದೆ.

ವಯಸ್ಸಾಗಿರುವುದರಿಂದ ವಾರಕ್ಕೆ ಎರಡು, ಮೂರು ದಿನ ಮಾತ್ರ ಇವರಿಂದ ಕೂಲಿ ಕೆಲಸ ಮಾಡಲು ಸಾಧ್ಯ. ನೆಮ್ಮದಿಯಾಗಿ ಮನೆಯಲ್ಲಿ ನಿದ್ರಿಸೋಣವೆಂದರೆ ಸೂರಿನ ಸೌಭಾಗ್ಯ ಇವರಿಗಿಲ್ಲ. ಇರುವ ಅಲ್ಪ ಜಾಗಕ್ಕೆ ಹಕ್ಕುಪತ್ರವನ್ನು ನೀಡಲಾಗಿದೆ, ಈ ಜಾಗದಲ್ಲಿ ಶೀಟ್‌ನಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಇಲ್ಲೇ ಇವರು ವಾಸವಾಗಿದ್ದರೂ ವಸತಿ ಯೋಜನೆಯಡಿ ಮನೆಯೊಂದನ್ನು ನಿರ್ಮಿಸಿಕೊಡುವ ಮಾನವೀಯತೆಯನ್ನು ಗ್ರೇಡ್ ನಂ. ೧ ಹೆಗ್ಗಳಿಕೆಯ ನೆಲ್ಯಹುದಿಕೇರಿ ಗ್ರಾ.ಪಂ ತೋರಿಲ್ಲ.

ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳೆಲ್ಲವೂ ಬೆಳವಣಿಗೆ ಕಾಣುತ್ತಿವೆ, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಮೀನು, ಮಾಂಸ ಮತ್ತಿತರ ವ್ಯವಹಾರಗಳಿಂದ ಗ್ರಾ.ಪಂ.ಗೆ ಅಧಿಕ ಆದಾಯ ಬರುತ್ತಿದೆ. ಸುತ್ತಮುತ್ತ ಐಶಾರಾಮಿ ಮನೆಗಳು ತಲೆ ಎತ್ತಿವೆ, ಆದರೆ ಬಡಪಾಯಿ ಮುನಿಯಾಂಡಿ ಅವರ ಗುಡಿಸಲು ಮಾತ್ರ ಜೋಪಡಿಯಂತಿದೆ. ಕನಿಷ್ಟ ಮೂಲಭೂತ ಸೌಲಭ್ಯ ಕೂಡ ಇಲ್ಲಿಲ್ಲ, ಕುಡಿಯುವ ನೀರು, ವಿದ್ಯುತ್, ಚರಂಡಿ ಮತ್ತಿತರ ವ್ಯವಸ್ಥೆಗಳು ಮರೀಚಿಕೆಯಾಗಿದೆ. ಶೌಚಾಲಯಕ್ಕೆ ಗೋಣಿಚೀಲಗಳೇ ರಕ್ಷಣೆಯಾಗಿವೆ.

ತಮ್ಮ ಅತಂತ್ರ ಬದುಕಿನ ಬಗ್ಗೆ ಹಲವು ಬಾರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಸಂಕಷ್ಟದಿAದ ಪಾರು ಮಾಡುವಂತೆ ಕೋರಿಕೊಂಡರೂ ಇಲ್ಲಿಯವರೆಗೆ ಯಾವುದೇ ಸ್ಪಂದನ ದೊರೆತ್ತಿಲ್ಲ. ದೇಶ ಸ್ವಾತಂತ್ರö್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮುಳುಗಿದೆ, ಆದರೆ ಈ ರೀತಿಯ ಬಡ ಜೀವಗಳು ನಿತ್ಯ ಕಣ್ಣೀರು ಹಾಕುವ ಪರಿಸ್ಥಿತಿಯಲ್ಲಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಆದಷ್ಟು ಶೀಘ್ರ ಕ್ಷೇತ್ರದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಬಡಪಾಯಿ ಮುನಿಯಾಂಡಿಯ ಸಂಕಷ್ಟಗಳನ್ನು ಖುದ್ದು ಅರಿತು ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಉತ್ತಮ ವಸತಿ ಮತ್ತು ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು.

(ಅಂಚೆಮನೆ ಸುಧಿ)