ಮಡಿಕೇರಿ ಚಿಕ್ಕಪೇಟೆಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ... ೨೫.೩.೧೯೭೩ ರಂದು ಮೇರಿಯಂಡ ಸಿ. ನಾಣಯ್ಯ ಅವರ ಮುಂದಾಳತ್ವದಲ್ಲಿ ಸ್ಥಾಪಿಸಲಾಗಿದ್ದ ಜನರಲ್ ತಿಮ್ಮಯ್ಯ ಪುತ್ಥಳಿ ಇಂದು ಅಲ್ಪಕಾಲೀನವಾಗಿ ಖಾಲಿ ಬಿದ್ದಿದೆ! ಇತ್ತೀಚೆಗೆ ೨೧.೦೮.೨೦೨೩ ರಂದು ಆ ವೃತ್ತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಅಪಘಾತವಾಗಿ ಪುತ್ಥಳಿ ಕೆಳಗುರುಳಿ ಜಖಂಗೊAಡಿದೆ. ಮೂಲಸ್ವರೂಪವನ್ನು ಉಳಿಸಿಕೊಂಡು ಇದರ ದುರಸ್ತಿ ಕಾರ್ಯವು ತಜ್ಞರಿಂದ ಮೈಸೂರಿನಲ್ಲಿ ನಡೆಯುತ್ತಿದೆ ಎಂದೂ; ಶೀಘ್ರದಲ್ಲಿಯೇ ಇದರ ಮರುಸ್ಥಾಪನೆ ಮೂಲಸ್ಥಳದಲ್ಲಿಯೇ ನಡೆಯಲಿದೆಯೆಂದೂ ತಿಳಿದು ಬಂದಿದೆ.

ಈ ಅನಿರೀಕ್ಷಿತ ಅಪಘಾತ ಘಟನೆಯು ಲಕ್ಷಾಂತರ ತಿಮ್ಮಯ್ಯ ಅಭಿಮಾನಿಗಳಿಗೆ ಆಘಾತ, ಅಸಮಾಧಾನ, ನೋವು ಉಂಟು ಮಾಡಿರುವುದು ಸಹಜ. ಶೀಘ್ರದಲ್ಲಿಯೇ ಮೂಲಸ್ಥಳ, ಮೂಲರೂಪದಲ್ಲಿ ಪುನರ್ ಪ್ರತಿಷ್ಠಾಪನೆ ಆಗಲಿದೆ ಎನ್ನುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ಆಗಿದೆ.

ಆಕಸ್ಮಿಕವಾಗಿಯೂ, ಅನಿರೀಕ್ಷಿತವಾಗಿಯೂ ಆಗಿ ಹೋದ ಈ ದುರ್ಘಟನೆ ವಿಶ್ವ ವಿಖ್ಯಾತ ವೀರಸೇನಾನಿ ಪದ್ಮಭೂಷಣ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ಘನತೆ - ಗೌರವಕ್ಕೆ ಅಲ್ಪಕಾಲಿಕವಾಗಿ ಚ್ಯುತಿ ಬಂದAತಾಗಿದೆ ಎಂಬದು ಅಭಿಮಾನಿಗಳ ಅಪಸ್ವರ ಆಗಿದೆ. ಈ ಅಸಮಾಧಾನ, ಅವಮಾನಾದಿಗಳನ್ನು ನಿವಾರಿಸಿ, ಭಾವೈಕ್ಯದ ಮುಕ್ತ ವಾತಾವರಣ ಕಲ್ಪಿಸುವ ಹಿನ್ನೆಲೆಯಲ್ಲಿ... ಜನರಲ್ ತಿಮ್ಮಯ್ಯ ಪುತ್ಥಳಿ ಪುನರ್‌ಸ್ಥಾಪನೆ ಕಾರ್ಯವು ರಾಷ್ಟಿçÃಯ ಗೌರವದಿಂದ ಜರುಗಬೇಕಾದುದು ಅಪೇಕ್ಷಣೀಯ. ಹೀಗೆ ಮಾಡಿದುದೇ ಆದರೆ... ಅದು ಸೈನಿಕ ಜಿಲ್ಲೆ ಕೊಡಗಿನ ಹಿರಿಮೆಗೆ ಗರಿ ಮೂಡಿಸಿದಂತೆ ಆಗಬಲ್ಲದು. ಉದಾಹರಣೆ:-

(೧) ಮಡಿಕೇರಿ ಚಿಕ್ಕಪೇಟೆ ತಿಮ್ಮಯ್ಯ ವೃತ್ತದ ಇಬ್ಬದಿ ರಸ್ತೆಯನ್ನು ತಕ್ಷಣ ಅಭಿವೃದ್ಧಿಪಡಿಸಿ, ವೃತ್ತವನ್ನು ಆಕರ್ಷಣೀಯವಾಗಿ ಮಾಡುವುದು.

(೨) ದುರಸ್ತಿಗೊಂಡ ಪುತ್ಥಳಿಯನ್ನು ಮೈಸೂರಿನಿಂದ ಮಡಿಕೇರಿಗೆ ಸಾಗಿಸುವ ಕಾರ್ಯಕ್ರಮ ಪಟ್ಟಿಯ ವಿವರಗಳನ್ನು ಕೊಂಚ ದಿನ ಮುಂಚಿತವಾಗಿ ಸಾರ್ವಜನಿಕವಾಗಿ ಪ್ರಕಟಿಸುವುದು.

(೩) ಸಿದ್ಧಗೊಂಡ ಪುತ್ಥಳಿ ಮೈಸೂರಿನಿಂದ ವಿಶೇಷ ವಾಹನದಲ್ಲಿ ಬರುವಾಗ... ವಾಹನದ ಹಿಂದೆ - ಮುಂದೆ ಸೇನೆ ಮತ್ತು ಪೊಲೀಸ್ ಬಂದೋಬಸ್ತು... ಎಸ್ಕಾರ್ಟ್ ಸಮರ್ಥವಾಗಿ ಏರ್ಪಡಿಸುವುದು.

(೪) ಪುತ್ಥಳಿ ಸಾಗುವ ಹಾದಿಯಲ್ಲಿ ಮೈಸೂರು, ಹುಣಸೂರು - ಪಿರಿಯಾಪಟ್ಟಣ - ಕುಶಾಲನಗರ - ಸುಂಟಿಕೊಪ್ಪ - ಮಡಿಕೇರಿ ಈ ಊರುಗಳ ಕೊಡವ ಸಮಾಜ, ಬೇರೆ ಸಮಾಜ, ಸಂಘ-ಸAಸ್ಥೆಗಳು, ಮಾಜಿ ಸೈನಿಕರಾದಿಯಾಗಿ ಆಸಕ್ತರು ಅಲ್ಲಲ್ಲಿ ಪುತ್ಥಳಿ ವೀಕ್ಷಿಸಿ ಗೌರವÀ ಸೂಚಿಸಲು ಕೆಲವಾರು ನಿಮಿಷಗಳ ಸಮಯಾವಕಾಶ ಕಲ್ಪಿಸಿಕೊಡುವುದು.

(೫) ಮೈಸೂರಿನಿಂದ ಹೊರಡುವ ವಾಹನದ ಹಿಂದೆ ಅಭಿಮಾನಿಗಳ ಬೇರೆ ಖಾಸಗಿ ವಾಹನಗಳು ಸಾಲಾಗಿ ಮೆರವಣಿಗೆಯಲ್ಲಿ ಸಂಚರಿಸಿ ಗೌರವ ಸೂಚಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸುವುದು.

(೬) ಕೊಡಗಿನ ಗಡಿ... ಕಾವೇರಿ ನದಿ ದಾಟಿದ ನಂತರ ಕುಶಾಲನಗರದಿಂದ ಮಡಿಕೇರಿಯವರೆಗೆ ವಾಹನದ ಹಿಂಭಾಗದಲ್ಲಿ ಬೈಕ್‌ಗಳು, ಸೈಕಲ್‌ಗಳು ಮತ್ತು ಬೇರೆ ವಾಹನಗಳು ಶಿಸ್ತಿನಿಂದ ಸಾಲಾಗಿ ಮಡಿಕೇರಿಯವರೆಗೆ ಸಾಗಲು ಅನುವು ಮಾಡುವುದು.

(೭) ಮಡಿಕೇರಿ ಫೀ.ಮಾ. ಕಾರ್ಯಪ್ಪ ವೃತ್ತ (ಹಳೆಯ ಸುದರ್ಶನ ವೃತ್ತ) ತಲುಪಿದಲ್ಲಿ, ಬೇರೆಲ್ಲಾ ವಾಹನಗಳನ್ನು ಅಲ್ಲಿ ಸ್ಥಗಿತಗೊಳಿಸುವುದು, ಪುತ್ಥಳಿ ಹೊತ್ತ ವಾಹನ ಮಾತ್ರ ಚಿಕ್ಕಪೇಟೆ ಕಡೆಗೆ ಸಾಗಬೇಕು. ಉಳಿದಂತೆ ಅಭಿಮಾನಿಗಳು ಅಲ್ಲಿಂದ ಕಾಲ್ನಡಿಗೆಯಲ್ಲಿ ಶಿಸ್ತಿನಿಂದ ಮೆರವಣಿಗೆ ರೂಪದಲ್ಲಿ ಚಿಕ್ಕಪೇಟೆಗೆ ಮುಂದಡಿ ಇಡುವುದು.

(೮) ಈ ಅಪರೂಪದ ಮೆರವಣಿಗೆಯಲ್ಲಿ... ಮಾಜಿ ಸೈನಿಕರು, ಎನ್‌ಸಿಸಿ, ಸ್ಕೌಟ್-ಗೈಡ್ಸ್, ಸೈನಿಕ ಶಾಲಾ ವಿದ್ಯಾರ್ಥಿಗಳು, ಇತರ ವಿದ್ಯಾರ್ಥಿಗಳು... ಪೊಲೀಸ್ ಬ್ಯಾಂಡ್, ಮಿಲಿಟರಿ ಬ್ಯಾಂಡ್, ಕೊಂಬುಕೊಟ್ಟ್ ವಾಲಗ, ದುಡಿಕೊಟ್ಟ್ ಪಾಟ್... ಎನ್‌ಸಿಸಿ ಬ್ಯಾಂಡ್ ಸಮೇತ ಶಿಸ್ತಿನಿಂದ ಆಕರ್ಷಕವಾಗಿ ಮುಂದುವರಿಯುವುದು.

(೯) ಚಿಕ್ಕಪೇಟೆ ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಪೂರ್ವಭಾವಿ ಕೆಲಸ ಕಾರ್ಯಗಳನೆಲ್ಲ ಮೊದಲೇ ಸಮಯೋಚಿತವಾಗಿ ಪೂರೈಸುವುದು.

(೧೦) ಪುತ್ಥಳಿ ಅಳವಡಿಸುವ ಕಾರ್ಯದ ವೇಳೆಯಲ್ಲಿ... ಜನರಲ್ ತಿಮ್ಮಯ್ಯನವರ ಸೇವೆ - ಸಾಧನೆಗಳ ಪರಿಚಯ, ದೇಶಭಕ್ತಿ ಗೀತೆ, ಸಂಗೀತ... ಇಂತಹ ಆಕರ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

(೧೧) ಜನರಲ್ ತಿಮ್ಮಯ್ಯನವರ ಕುಮೋನ್ ರೆಜಿಮೆಂಟ್ ಮತ್ತು ಕೂರ್ಗ್ ರೆಜಿಮೆಂಟ್ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು, ಕೊಡಗು ಜಿಲ್ಲಾಡಳಿತ, ಜನಪ್ರತಿನಿಧಿಗಳು, ರಾಜ್ಯ ಸರಕಾರದ ಮುಖ್ಯಸ್ಥರು, ಹಿರಿಯ ತಿಮ್ಮಯ್ಯ ಅಭಿಮಾನಿಗಳು... ಇಂತಹವರು ಸಮಾರಂಭಕ್ಕೆ ಸಾಕ್ಷಿಯಾಗುವಂತೆ ಹಾಜರಿರುವುದು.

(೧೨) ಈ ಅಪರೂಪದ ಐತಿಹಾಸಿಕ ಕಾರ್ಯಕ್ರಮಕ್ಕೆ - ಕೊಡಗು ಜಿಲ್ಲಾಡಳಿತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂ, ಮಾಜಿ ಸೈನಿಕರ ಸಂಘ, ಸೈನಿಕ ಕಲ್ಯಾಣ ಇಲಾಖೆ, ಜನರಲ್ ತಿಮ್ಯಯ್ಯ ಅಭಿಮಾನಿಗಳು... ಇಂತಹವರೆಲ್ಲರು ಸಕ್ರಿಯವಾಗಿ ಕೈ ಜೋಡಿಸುವ ಮೂಲಕ... ಕೊಡಗಿನ ಭವ್ಯ ಸೈನಿಕ ಪರಂಪರೆಗೆ ಲವಲೇಶ ಚ್ಯುತಿ ಬಾರದಂತೆ ನಾಜೂಕಾಗಿ ಕಾರ್ಯ ನಿರ್ವಹಿಸುವುದು.

(೧೩) ಈ ಕ್ಷಿಪ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು... ಉನ್ನತಮಟ್ಟದ ಸಮಿತಿಯನ್ನು ಕೂಡಲೇ ರಚಿಸುವುದು.

ಒಟ್ಟಾರೆ, ಈ ವಿಶಿಷ್ಟ ಕಾರ್ಯಕ್ರಮವು ‘‘ಸೈನಿಕ ಹಬ್ಬ’’ದಂತೆ ನಡೆಯುವುದರ ಮೂಲಕ... ವಿಶ್ವವಿಖ್ಯಾತ ವೀರಸೇನಾನಿ ಪದ್ಮಭೂಷಣ ಕೊಡಂದೇರ ಎಸ್. ತಿಮ್ಮಯ್ಯ ಅವರ ಶಿಸ್ತು - ಘನತೆ - ಗೌರವ - ಖ್ಯಾತಿ ಇತ್ಯಾದಿಗಳಿಗೆ ಮಕುಟ ಪ್ರಾಯದಂತೆ ವಿಜೃಂಭಿಸಲಿ ಎಂದು ಹಾರೈಸುತ್ತೇನೆ.

- ಉಳ್ಳಿಯಡ ಎಂ. ಪೂವಯ್ಯ, ಮಡಿಕೇರಿ. ಮೊ. ೯೪೪೮೭೨೦೧೬೮