ಬೆಂಗಳೂರು ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಸೆ. ೨೬: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದ ಹಿನ್ನೆಲೆ ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಔಷಧಾಲಯ ಮಳಿಗೆಗಳನ್ನು ಹೊರತುಪಡಿಸಿ ನಗರದ ಕೆಲವು ಭಾಗಗಳಲ್ಲಿ ಹಲವಾರು ಅಂಗಡಿಗಳನ್ನು ಮುಚ್ಚಲಾಗಿತ್ತು. ವಸತಿ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ಬೀದಿ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಹೊಟೇಲ್ಗಳು ಎಂದಿನAತೆ ಕಾರ್ಯನಿರ್ವಹಿಸಿದವು. ಬಿಎಂಟಿಸಿ ಬಸ್ಗಳು, ನಮ್ಮ ಮೆಟ್ರೋ, ಕ್ಯಾಬ್ಗಳು ಮತ್ತು ಆಟೋ-ರಿಕ್ಷಾಗಳಂತಹ ಸಾರಿಗೆ ಸೇವೆಗಳು ಸಹ ಕಾರ್ಯನಿರ್ವಹಿಸಿದವು. ಆದಾಗ್ಯೂ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಗರದ ರಸ್ತೆಗಳಲ್ಲಿನ ದಟ್ಟಣೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ಅನೇಕ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೆಲಸ ಮಾಡುವಂತೆ ನಿರ್ದೇಶನ ನೀಡಿವೆ. ಶಾಲಾ-ಕಾಲೇಜುಗಳು ಸಹ ಮುಚ್ಚಲ್ಪಟ್ಟಿತ್ತು. ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ಪ್ರತಿಭಟನಾ ಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಟೌನ್ಹಾಲ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಶಾಂತಕುಮಾರ್ ಹಾಗೂ ಇತರ ಮುಖಂಡರನ್ನು ಪೊಲೀಸರು ತಡೆದರು. ಪ್ರತಿಭಟನೆ ನಡೆಸಲು ಟೌನ್ಹಾಲ್ನಲ್ಲಿ ಜಮಾಯಿಸಿದ ಹಲವಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನೂ ಪೊಲೀಸರು ಥಳಿಸಿದರು. ಪ್ರತಿಭಟನೆ ಮತ್ತು ಬಂದ್ ಮೊಟಕುಗೊಳಿಸಲು ಪೊಲೀಸ್ ಬಲವನ್ನು ಬಳಸಲಾಗಿದೆ ಎಂದು ರೈತ ಮುಖಂಡರು ಮತ್ತು ಕನ್ನಡ ಕಾರ್ಯಕರ್ತರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
೧೮ ದಿನ ತ.ನಾಡಿಗೆ ೩ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
ನವದೆಹಲಿ, ಸೆ. ೨೬: ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಇಂದು ನಡೆದ ಸಭೆಯಲ್ಲಿ ತಾ. ೨೮ ರಿಂದ ಅಕ್ಟೋಬರ್ ೧೫ ರವರೆಗೆ ಅಂದರೆ ೧೮ ದಿನಗಳ ಕಾಲ ತಮಿಳುನಾಡಿಗೆ ನಿತ್ಯ ೩ ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ. ನವದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಸಮಿತಿಯ ಮುಂದೆ ತಮ್ಮ ಸಲ್ಲಿಕೆಗಳನ್ನು ಸಲ್ಲಿಸಿದವು. ಸೆಪ್ಟೆಂಬರ್ ೨೫ರವರೆಗೆ ರಾಜ್ಯದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವಿನ ಕೊರತೆಯು ಶೇ. ೫೩.೦೪ ರಷ್ಟಿದೆ ಎಂದು ಕರ್ನಾಟಕ ವಾದಿಸಿದೆ.
ಕುದುರೆ ಸವಾರಿಯಲ್ಲಿ ಭಾರತಕ್ಕೆ ಚಿನ್ನ
ಹ್ಯಾಂಗ್ಝೌ, ಸೆ. ೨೬: ಏಷ್ಯನ್ ಗೇಮ್ಸ್ ೨೦೨೩ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು ಈಕ್ವೇಸ್ಟಿçಯನ್ (ಕುದುರೆ ಸವಾರಿ)ನಲ್ಲಿ ಬರೊಬ್ಬರಿ ೪೧ ವರ್ಷಗಳ ಬಳಿಕ ಭಾರತ ತಂಡಕ್ಕೆ ಚಿನ್ನದ ಪದಕ ಲಭಿಸಿದೆ. ೨೦೨೩ ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕುದುರೆ ಸವಾರಿ ತಂಡವು ಇತಿಹಾಸವನ್ನು ನಿರ್ಮಿಸಿದ್ದು, ಟೀಮ್ ಡ್ರೆಸ್ಸೇಜ್ ಈವೆಂಟ್ನಲ್ಲಿ, ತಂಡವು ಅಗ್ರಸ್ಥಾನಕ್ಕೇರಿ ಚಿನ್ನ ಪದಕವನ್ನು ಗೆದ್ದುಕೊಂಡಿದೆ. ಆ ಮೂಲಕ ಬರೊಬ್ಬರಿ ೪೧ ವರ್ಷಗಳ ಬಳಿಕ ಭಾರತ ಕುದುರೆ ಸವಾರಿ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಈ ಕ್ರೀಡೆಯಲ್ಲಿ ೧೯೮೨ ರ ಬಳಿಕ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ. ಸುದೀಪ್ತಿ ಹಜೇಲಾ, ಹೃದಯ್ ವಿಪುಲ್ ಛೇಡಾ, ಅನುಷ್ ಗರ್ವಾಲಾ ಮತ್ತು ದಿವ್ಯಕೃತಿ ಸಿಂಗ್ ಅವರ ಭಾರತ ತಂಡವು ಕುದುರೆ ಸವಾರಿಯಲ್ಲಿ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದೆ.
ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಮುಂಬೈ, ಸೆ. ೨೬: ಬಾಲಿವುಡ್ನ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಅವರಿಗೆ ಈ ಬಾರಿಯ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ. ದೇಶದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ರೆಹಮಾನ್ ಅವರು "ಪ್ಯಾಸಾ", "ಸಿಐಡಿ", "ಗೈಡ್", "ಕಾಗಜ್ ಕೆ ಫೂಲ್", "ಖಾಮೋಶಿ" ಮತ್ತು "ತ್ರಿಶೂಲ್" ಸೇರಿದಂತೆ ಚಲನಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿದ್ದಾರೆ.
ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐದು ಸಮಿತಿ
ಬೆಂಗಳೂರು, ಸೆ. ೨೬: ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐದು ಸಮಿತಿಗಳನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ, ೬, ೭ನೇ ತರಗತಿಯ ಸಮಾಜ ವಿಜ್ಞಾನ ಹಾಗೂ ೮, ೯, ೧೦ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲೂಕಿನ ನಿವೃತ್ತ ಪ್ರಾಧ್ಯಾಪಕ ಮಂಜುನಾಥ ಜಿ. ಹೆಗಡೆ ಅವರನ್ನು ಐದೂ ಸಮಿತಿಗಳ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ - ಸಿದ್ದರಾಮಯ್ಯ
ಮೈಸೂರು, ಸೆ. ೨೬: ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಕಾವೇರಿ ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸಿದ್ಧವಿದ್ದು, ಈ ಬಗ್ಗೆ ನರೇಂದ್ರ ಮೋದಿ ಆಸಕ್ತಿ ತೋರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. ಪತ್ರಕರ್ತರ ಜೊತೆ ಮಾತನಾಡಿದ ಅವರು ಸಾಮಾನ್ಯ ಮಳೆಯ ವರ್ಷಗಳಲ್ಲಿ ತಮಿಳುನಾಡಿಗೆ ೧೭೭.೨೫ ಟಿಎಂಸಿ ಅಡಿ ನೀರು ಬಿಡುವಂತೆ ನ್ಯಾಯಾಲಯದ ತೀರ್ಪು ನೀಡಿದೆ. ಆದರೆ ಸಂಕಷ್ಟದ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಸೂತ್ರ ಇಲ್ಲ. ಅಂತಹ ವರ್ಷಗಳಲ್ಲಿ ಮಾತುಕತೆ ಮೂಲಕ ಮಾತ್ರ ನೀರು ಹಂಚಿಕೆ ಸಾಧ್ಯ. ಇದಕ್ಕೆ ಸಂಕಷ್ಟ ಸೂತ್ರ ರಚನೆ ಅತ್ಯಗತ್ಯ. ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಎರಡೂ ರಾಜ್ಯಗಳಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.