ಮಡಿಕೇರಿ, ಸೆ. ೨೫ : ದಸರಾ ಉತ್ಸವದಲ್ಲಿ ಅಬ್ಬರದಲ್ಲಿ ಡಿಜೆ ಬದಲಿಗೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಪ್ರದರ್ಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.

ಉಸ್ತುವಾರಿ ಸಚಿವ ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಣಿಕೊಪ್ಪಲು ದಸರಾ ಉತ್ಸವ ಆಚರಣೆ ಸಂಬAಧ ನಡೆದ ಪೂರ್ವಭಾವಿ ಸಭೆಯಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರು, ದಸರಾ ಉತ್ಸವ ಅಂಗವಾಗಿ ಒಂಭತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ರಾತ್ರಿ ೧೨ಗಂಟೆವರೆಗೂ ಮುಂದುವರಿಯುತ್ತದೆ. ಆದರೆ, ಧ್ವನಿವರ್ಧಕ ಬಳಸಲು ಪೊಲೀಸರು ಅಡ್ಡಿಪಡಿಸುತ್ತಿದ್ದು, ೧೨ ಗಂಟೆವರೆಗೆ ಅವಕಾಶ ಮಾಡಿಕೊಡುವಂತೆ ಕೋರಿದರು. ಪ್ರತಿಕ್ರಿಯಿಸಿದ ವರಿಷ್ಠಾಧಿಕಾರಿಗಳು; ಕೊಡಗಿನ ದಸರಾ ಅಂದರೆ ಅಲ್ಲಿ ಕೊಡಗಿನ ವಿಶೇಷ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು, ಸಂಗೀತ ಪರಿಕರಗಳನ್ನು ಪ್ರದರ್ಶಿಸಬೇಕು. ಪ್ರವಾಸಿಗರಿಗೆ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸಬೇಕು. ಅದು ಬಿಟ್ಟು ಕೇರಳ, ತಮಿಳುನಾಡಿನ ಹಾಡಿನ

(ಮೊದಲ ಪುಟದಿಂದ) ಡಿಜೆ ಹಾಕುವದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಅಲ್ಲದೆ, ರಾತ್ರಿ ೧೦ರ ಬಳಿಕ ಧ್ವನಿವರ್ಧಕ ಬಳಸದಂತೆ ನ್ಯಾಯಾಲಯದ ಆದೇಶವಿದ್ದು, ಅದನ್ನು ಪಾಲನೆ ಮಾಡಲೇಬೇಕೆಂದು ಹೇಳಿದರು. ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿ; ದಸರಾ ಒಂದು ಹಬ್ಬ, ಡಿಜೆ ಕಾರ್ಯಕ್ರಮ ಇರುತ್ತದೆ, ಅದಕ್ಕೆ ತೊಂದರೆ ಮಾಡಬೇಡಿ ಎಂದು ಹೇಳಿದರು.

ಶಾಸಕ ಪೊನ್ನಣ್ಣ ಮಾತನಾಡಿ; ವರಿಷ್ಠಾಧಿಕಾರಿಗಳ ಅಭಿಪ್ರಾಯ ಸಮ್ಮತವಾಗಿದೆ. ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಕಾರ್ಯಕ್ರಮ ನೀಡಬೇಕು. ತಮಿಳುನಾಡು, ಕೇರಳದ ಡಿಜೆ ಹಾಡು ಸೂಕ್ತವಲ್ಲ. ಜಿಲ್ಲೆಯಲ್ಲಿ ಅನೇಕ ಕಲಾತಂಡಗಳಿವೆ. ನಮ್ಮ ನಾಡಹಬ್ಬವನ್ನು ನಾವು ಆಚರಿಸುವಂತಾಗಬೇಕು. ಹೆಚ್ಚು ಶಬ್ಧ ನೀಡದೆ ಕಾರ್ಯಕ್ರಮ ಮಾಡುವಂತೆ ಸಲಹೆ ಮಾಡಿದರು.

ಇದೇ ಸಂದರ್ಭ ದಸರಾಗೆ ಹೆಚ್ಚಿನ ಅನುದಾನ ನೀಡಬೇಕು, ರಸ್ತೆ ಗುಂಡಿ ಮುಚ್ಚುವದರೊಂದಿಗೆ ಹಳೆಯದಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವಂತೆ ಮನವಿ ಮಾಡಿದರು.