ಮಡಿಕೇರಿ, ಸೆ. ೨೫: ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕಾವೇರಿ ನೀರಾವರಿ ನಿಗಮದಿಂದ ರೂ. ೧ ಕೋಟಿ ಅನುದಾನ ಒದಗಿಸುವಂತೆ ವಿಧಾನ ಸಭೆ ಮಾಜಿ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ ಸಂಬAಧಿಸಿದವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕೆ.ಜಿ. ಬೋಪಯ್ಯ ಅವರು ಮನವಿ ಸಲ್ಲಿಸಿದ್ದು, ಕಾವೇರಿ ತೀರ್ಥೋದ್ಭವದಂದು ೨೦೧೦ರಿಂದ ಕೊಡಗಿಗೆ ಸೀಮಿತವಾಗಿ ಸಾರ್ವಜನಿಕ ರಜೆಯನ್ನು ಸರ್ಕಾರ ಘೋಷಿಸಿಕೊಂಡು ಬಂದಿದೆ. ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಭಾಗಮಂಡಲ ಪಂಚಾಯಿತಿಗೆ ಕಾವೇರಿ ನೀರಾವರಿ ನಿಗಮದಿಂದ ರೂ. ೬೦ ಲಕ್ಷ ಅನುದಾನವನ್ನು ಪ್ರತಿ ವರ್ಷ ಮಂಜೂರು ಮಾಡಿಕೊಂಡು ಬರಲಾಗಿದೆ. ಈ ಬಾರಿ ತೀರ್ಥೋದ್ಭವ ರಾತ್ರಿ ಜರುಗಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಆದ್ದರಿಂದ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದಿಂದ ರೂ. ೧ ಕೋಟಿ ಅನುದಾನವನ್ನು ಭಾಗಮಂಡಲ ಪಂಚಾಯಿತಿಗೆ ಮಂಜೂರು ಮಾಡಲು ಕ್ರಮಕೈಗೊಳ್ಳುವಂತೆ ಬೋಪಯ್ಯ ಮನವಿಯಲ್ಲಿ ಕೋರಿದ್ದಾರೆ. ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರು ತಮಗೆ ನೀಡಿರುವ ಮನವಿ ಪತ್ರವನ್ನು ಲಗತ್ತಿಸಿ ಬೋಪಯ್ಯ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ.