ಶನಿವಾರಸಂತೆ, ಸೆ. ೨೪: ಕತ್ತಿಯಿಂದ ಕಡಿದು ಹಲ್ಲೆಗೈದಿದ್ದ ಆರೋಪಿಗೆ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಭತ್ತದ ಹೊರೆಯನ್ನು ಹೊತ್ತು ಕಣಕ್ಕೆ ಸಾಗಿಸುತ್ತಿದ್ದ ಲೋಕೇಶ್(೬೦) ಎಂಬವರನ್ನು ದಾರಿ ತಡೆದು ಅವಾಚ್ಯವಾಗಿ ನಿಂದಿಸಿ, ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದ ಆರೋಪಿ ಎನ್.ಪಿ. ಬಸಪ್ಪ (೭೧) ಅವರಿಗೆ ಸೋಮವಾರಪೇಟೆ ಜೆಎಂಎಫ್‌ಸಿ ನ್ಯಾಯಾಲಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ. ಗೋಕುಲ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
೨೦೨೧ ರ ಜನವರಿ ೩ ರಂದು ಹಲ್ಲೆ ಘಟನೆ ನಡೆದಿದ್ದು ಹಲ್ಲೆಗೊಳಗಾದ ಲೋಕೇಶ್ ಪತ್ನಿ ಮಮತಾ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಪ್ರಕರಣದಲ್ಲಿ ಆರೋಪಿ ಎನ್.ಪಿ. ಬಸಪ್ಪ ವಿರುದ್ಧ ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿ, ಪಿಎಸ್‌ಐ ದೇವರಾಜ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಕೆ. ಗೋಕುಲ್ ಸಿಆರ್‌ಪಿಸಿ ೨೪೮(೧) ರ ಪ್ರಕಾರ ಆರೋಪಿ ಎನ್.ಪಿ. ಬಸಪ್ಪನವರಿಗೆ ಶಿಕ್ಷೆ ವಿಧಿಸಿ ೬ ತಿಂಗಳ ಕಾಲ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದಂತೆ ಹಾಗೂ ರೂ.೫೦ ಸಾವಿರ ಜಾಮೀನಿನ ಬಾಂಡ್ ಮೇಲೆ ಬಿಡುಗಡೆಗೊಳಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಹೇಮಂತ್ ಪೊನ್ನಪ್ಪ ವಾದ ಮಂಡಿಸಿದರು.