ಸಿದ್ದಾಪುರ, ಸೆ. ೨೪: ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಪಸಲುಗಳನ್ನು ನಾಶ ಮಾಡಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಕರಡಿಗೋಡು ಗ್ರಾಮದ ಕುಕುನೂರು ಚೇತನ್ ಎಂಬವರ ಕಾಫಿ ತೋಟದೊಳಗೆ ಕಾಡಾನೆಗಳು ಬೀಡುಬಿಟ್ಟು ತೋಟದೊಳಗೆ ದಾಂಧÀಲೆ ನಡೆಸಿ ಫಸಲು ಇರುವ ಕಾಫಿ ಗಿಡಗಳನ್ನು ಹಾಗೂ ಬಾಳೆ ಗಿಡಗಳನ್ನು ತುಳಿದು ತಿಂದು ಧ್ವಂಸಗೊಳಿಸಿವೆ. ತೋಟದೊಳಗೆ ಇದ್ದ ಕೆರೆಗೂ ಹಾನಿಪಡಿಸಿವೆ.
ಭತ್ತದ ಕೃಷಿ ಮಾಡಿದ ಗದ್ದೆಗಳಿಗೂ ಕೂಡ ಕಾಡಾನೆಗಳು ಲಗ್ಗೆ ಇಟ್ಟು, ಭತ್ತದ ಕೃಷಿಯನ್ನು ತಿಂದು ಗದ್ದೆಗಳಲ್ಲಿ ಓಡಾಡಿ ಕೃಷಿ ನಾಶಗೊಳಿಸಿದ ಪರಿಣಾಮ ಚೇತನ್ ಅವರಿಗೆ ಅಪಾರ ನಷ್ಟ ಸಂಭವಿಸಿದೆ. ಕಳೆದ ಐದು ದಿನಗಳಿಂದ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ೨೦ಕ್ಕೂ ಅಧಿಕ ಕಾಡಾನೆಗಳು ಮರಿಯಾನೆಗಳೊಂದಿಗೆ ಸುತ್ತಾಡುತ್ತಿದ್ದು ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ರಾತ್ರಿ ಸಮಯದಲ್ಲಿ ಕರಡಿಗೋಡು ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಸುತ್ತಾಡುತ್ತಿರುವುದು ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ಈ ಭಾಗದ ನಿವಾಸಿಗಳು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು ಹಾಗೂ ನಷ್ಟ ಪರಿಹಾರವಾದ ಕೃಷಿಕರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.