ಸೋಮವಾರಪೇಟೆ, ಸೆ. ೨೪: ೨೪ ವರ್ಷಗಳ ಹಿಂದೆ ಹತ್ತನೇ ತರಗತಿ ವ್ಯಾಸಂಗ ಮುಗಿಸಿ ಮುಂದಿನ ವಿದ್ಯಾಭ್ಯಾಸ, ಉದ್ಯೋಗ, ಬದುಕು ಕಟ್ಟಿ ಕೊಳ್ಳಲು ನಾನಾ ಕ್ಷೇತ್ರಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಮತ್ತೆ ಒಂದುಗೂಡಿ ತಮಗೆ ಪಾಠ ಮಾಡಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದ ಭಾವುಕ ಕಾರ್ಯಕ್ರಮಕ್ಕೆ ಇಲ್ಲಿನ ಚನ್ನಬಸಪ್ಪ ಸಭಾಂಗಣ ಸಾಕ್ಷಿಯಾಯಿತು.
೨೪ ವರ್ಷಗಳ ಬಳಿಕ ತಮ್ಮ ಸಹಪಾಠಿಗಳನ್ನು ಭೇಟಿ ಮಾಡಿ ಉಭಯ ಕುಶಲೋಪರಿಯೊಂದಿಗೆ ಭಾವಪರವಶತೆಯ ಆಲಿಂಗನ, ಮಾತುಕತೆ ಒಂದೆಡೆಯಾದರೆ, ಶಿಕ್ಷಕರ ಕಾಲಿಗೆರಗಿ ಯೋಗಕ್ಷೇಮ ವಿಚಾರಿ ಸುತ್ತಿದ್ದ ಕ್ಷಣಗಳು, ಕಣ್ಣಂಚಿನಲ್ಲಿ ಭಾವು ಕತೆಯ ಕಣ್ಣೀರು ಜಿನುಗಿ ಇಡೀ ಕಾರ್ಯ ಕ್ರಮದ ಮೇಲೆ ತನ್ನ ಪ್ರಭಾವ ಬೀರಿತ್ತು!
ಇವೆಲ್ಲ ಘಟನಾವಳಿಗಳಿಗೆ ಕಾರಣ ವಾಗಿದ್ದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಕಳೆದ ೧೯೯೬ ರಿಂದ ೧೯೯೯ರವರೆಗೆ ೮ನೇ ತರಗತಿಯಿಂದ ೧೦ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಹಳೆ ವಿದ್ಯಾರ್ಥಿ ಗಳು ಆಯೋಜಿಸಿದ್ದ ಸ್ನೇಹ ಸಮ್ಮಿ ಲನ-ಗುರುವಂದನೆ ಕಾರ್ಯಕ್ರಮ.
ಸ್ಥಳೀಯ ಚನ್ನಬಸಪ್ಪ ಸಭಾಂ ಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಅಂದು ಸಹಪಾಠಿ ಗಳಾಗಿದ್ದ ಸುಮಾರು ೪೫ ಮಂದಿ ಭಾಗಿ ಯಾಗಿದ್ದರೆ, ಈ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಐವರು ಶಿಕ್ಷಕರು ಆಗಮಿಸಿ ಮತ್ತೆ ಜೀವನ ಪಾಠದ ಬೋಧನೆ ಮಾಡಿದರು.
ಕಾರ್ಯಕ್ರಮದಲ್ಲಿ ಎಲ್ಲರ ಪರಿಚಯ ಆಗುತ್ತಿದ್ದಂತೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಸಾಧನೆಗಳನ್ನು ಮನದಲ್ಲೇ ಮೆಚ್ಚಿಕೊಂಡು ಸಾರ್ಥ ಕತೆಯ ಭಾವ ತೋರುತ್ತಿದ್ದುದು ಗಮನಾರ್ಹವಾಗಿತ್ತು. ಸೋಮವಾರ ಪೇಟೆಯ ಮೈದಾನದಲ್ಲಿ ಕಾಫಿ ಗಿಡದ ಬುಡವನ್ನೇ ಸ್ಟಿಕ್ ಮಾಡಿಕೊಂಡು ಹಾಕಿ ಆಡುತ್ತಿದ್ದ ವಿದ್ಯಾರ್ಥಿ, ನಂತರ ಭಾರತ ಹಾಕಿ ತಂಡದ ಆಟಗಾರ ನಾಗಿ, ಉಪನಾಯಕನಾಗಿ, ಒಲಂಪಿಕ್ಸ್ ನಲ್ಲಿ ಭಾಗಿಯಾಗಿ, ಅರ್ಜುನ ಪ್ರಶಸ್ತಿ ಯನ್ನೂ ಮುಡಿಗೇರಿಸಿಕೊಂಡು ದೇಶಕ್ಕೆ ಕೀರ್ತಿ ತಂದ ಎಸ್.ವಿ. ಸುನಿಲ್ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾವು ಬೋಧನೆ ಮಾಡಿದ ಮಕ್ಕಳು ಇಂದು ಹಾಕಿ ಕ್ರೀಡಾಪಟು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಉದ್ಯಮಿಗಳು, ಉಪ ನ್ಯಾಸಕರು, ಪತ್ರಕರ್ತರು, ಕೃಷಿಕರು, ಚಾಲಕರು, ಗುತ್ತಿಗೆದಾರರು, ಸ್ವಯಂ ಉದ್ಯೋಗಿಗಳಾಗಿ ಬದುಕು ಕಂಡಿ ಕೊಂಡಿರುವುದನ್ನು ಮನಗಂಡ ಶಿಕ್ಷಕರು ಎಲ್ಲರಿಗೂ ಬದುಕಿನ ಪಾಠ ಮಾಡಿದರು. ವಿದ್ಯಾಭ್ಯಾಸದ ಅವಧಿಯಲ್ಲಿ ನಡೆದ ಕೆಲವೊಂದು ಘಟನಾವಳಿಗಳನ್ನು ಮೆಲುಕು ಹಾಕಿ ತಮ್ಮ ಮನಸ್ಸನ್ನು ೨೪ ವರ್ಷಗಳ ಹಿಂದಕ್ಕೆ ಕೊಂಡೊಯ್ದರು.
ಕಾರ್ಯಕ್ರಮದಲ್ಲಿ ೧೯೯೬ ರಿಂದ ೧೯೯೯ರ ಬ್ಯಾಚ್‌ಗೆ ಪಾಠ ಮಾಡಿದ ಶಿಕ್ಷಕರುಗಳಾದ ಮನೂಭಾಯಿ, ತಿಲೋತ್ತಮೆ, ಹೆಚ್.ಬಿ. ರಮೇಶ್, ಜಯರಾಂ, ಸೋಮಶೇಖರ್ ಅವರುಗಳನ್ನು ಸನ್ಮಾನಿಸಿ, ಗುರು ವಂದನೆ ಸಲ್ಲಿಸಲಾಯಿತು. ಹಾಕಿ ಕ್ರೀಡೆ ಯಲ್ಲಿ ಸಾಧನೆ ತೋರಿದ ಎಸ್.ವಿ. ಸುನಿಲ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಭುವ ನೇಂದ್ರ, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಹಾಗೂ ದಾನಿ ಗಿರೀಶ್ ಮಲ್ಲಪ್ಪ ಮೋರಿಕಲ್ಲು, ಕಾರ್ಯಕ್ರಮದ ಸಂಘಟಕ ಸುನಿಲ್‌ಕುಮಾರ್ ಅವರುಗಳನ್ನು ಶಿಕ್ಷಕರು ಹಾಗೂ ಸಹಪಾಠಿಗಳು ಸನ್ಮಾನಿಸಿದರು.