ಗೋಣಿಕೊಪ್ಪಲು, ಸೆ. ೨೪: ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ಶ್ರೀಮಂಗಲ ಹಾಗೂ ಕುಟ್ಟ ವಲಯ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು. ಸಮಾವೇಶವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಿಮ್ಮವನಾಗಿ, ನಿಮ್ಮ ಸೇವೆ ಮಾಡಲಿದ್ದೇನೆ. ರಾಜಕೀಯ ಮಾತುಗಳಿಗೆ ಯಾರೂ ಕೂಡ ಬಲಿಯಾಗಬಾರದು. ಸಾಮೂಹಿಕ ನಿರ್ಧಾರಗಳನ್ನು ಕೈಗೊಂಡು ಜವಾಬ್ದಾರಿಗಳನ್ನು ವಹಿಸಿಕೊಂಡು ನಾವೆಲ್ಲರೂ ಕೆಲಸ ಮಾಡಿದ್ದೇ ಆದಲ್ಲಿ, ಬದಲಾವಣೆ ಖಂಡಿತಾ ಸಾಧ್ಯವಿದೆ ಎಂದರು.
ಕ್ಷೇತ್ರದಲ್ಲಿ ಪ್ರಮುಖವಾಗಿ ಆರೋಗ್ಯ ವಿಚಾರದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಬಸ್ಸಿನ ವ್ಯವಸ್ಥೆ ಸಮಪರ್ಕವಾಗಿಲ್ಲ. ಕುಟ್ಟದಲ್ಲಿರುವ ಆಸ್ಪತ್ರೆಯ ವ್ಯವಸ್ಥೆ ಬದಲಾವಣೆಗೆ ಕ್ರಮ ಕೈಗೊಂಡಿದ್ದೇನೆ. ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ನೀಡಲು ಸಚಿವರಿಗೆ ಪತ್ರ ಬರೆದಿದ್ದೇನೆ. ೫೦ ಬಸ್‌ಗಳು ಬೇಕೆಂಬ ಬೇಡಿಕೆಗೆ ೨೦ ಬಸ್‌ಗಳನ್ನು ಮಂಜೂರು ಮಾಡಿದ್ದಾರೆ. ನಾಗರಿಕರ ಅವಶ್ಯಕ್ಕೆ ತಕ್ಕಂತೆ ಬಸ್‌ಗಳು ಸಂಚಾರ ಮಾಡಲಿವೆ. ಖಾಸಗಿ ಸಹಭಾಗಿತ್ವದೊಂದಿಗೆ ಆಸ್ಪತ್ರೆಗಳನ್ನು ಉನ್ನತೀಕರಣಗೊಳ್ಳಲು ಕ್ರಮ ಜರುಗಿಸಲಾಗುತ್ತದೆ. ಕುಟ್ಟ ಪಟ್ಟಣದಲ್ಲಿರುವ ರಸ್ತೆಯು ತೀರ ಹದಗೆಟ್ಟಿರುವುದರಿಂದ ಇದನ್ನು ಸರಿಪಡಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯು ನಮಗೆ ಸವಾಲಾಗಿದೆ. ಈ ಸವಾಲನ್ನು ನಾವು ಯಶಸ್ವಿಯಾಗಿ ಎದುರಿಸಬೇಕು. ಅದರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಜಿಲ್ಲಾ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ, ಕುಟ್ಟ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ನೀಡಿದ್ದಾರೆ. ಇದರಿಂದ ಪಕ್ಷದ ಗೆಲುವು ಸಾಧ್ಯವಾಗಿದೆ. ಈ ಭಾಗದ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯವಾಗಿ ನಡೆಯಬೇಕಾಗಿದೆ. ಹಲವು ಸಮಸ್ಯೆಗಳು ಹಲವು ದಶಕಗಳಿಂದ ಹಾಗೆಯೇ ಉಳಿದಿವೆ. ಈ ಭಾಗದಲ್ಲಿ ಬಹುತೇಕ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಶಾಸಕರು ಮುಂದಾಗಬೇಕೆAದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ಜನರ ಸೇವೆಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. ಕಾರ್ಮಿಕರ ಕಷ್ಟಕ್ಕೆ ಸ್ಪಂದನೆ ಸಿಗಬೇಕು. ಇಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮುಂದಿನ ಚುನಾವಣೆಯನ್ನು ಗಂಭೀರವಾಗಿ ಎದುರಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವಂತೆ ಕರೆ ನೀಡಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಫೆಡರೇಶನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಯುವ ಕಾಂಗ್ರೆಸ್‌ನ ಅಧ್ಯಕ್ಷ ನಾಮೇರ ಅಂಕಿತ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಬೀರಾಲಿ, ವಿನುವರ್ಗಿಸ್, ವಿ.ಕೆ. ಗೋಪಾಲಕೃಷ್ಣ, ಟಿ.ಎಂ. ಅಶ್ರಫ್, ಗಂಗಾಧರ, ಟಿ. ಸುರೇಶ್, ವಿಜಯನ್, ಶಂಕರ್, ವಿಷ್ಣು, ಮುತ್ತಯ್ಯ, ಪಳನಿವೇಲು, ಸುಬ್ಬ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ವಾರ್ಡ್ ಅಧ್ಯಕ್ಷರು ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಟ್ಟಣದ ಬಸ್ ನಿಲ್ದಾಣದಿಂದ ಕೊಡವ ಸಮಾಜದವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರಾದ ತೀತಿರ ಮಂದಣ್ಣ ಸ್ವಾಗತಿಸಿ, ವಂದಿಸಿದರು.