ಕಣಿವೆ, ಸೆ. ೨೪: ಸಾಲ ಸೋಲ ಮಾಡಿ ಲಕ್ಷಾಂತರ ರೂಗಳನ್ನು ವ್ಯಯ ಮಾಡಿ ಅರೆನೀರಾವರಿ ಪ್ರದೇಶದ ರೈತರು ಬೆಳೆದಂತಹ ಮುಸುಕಿನ ಜೋಳದ ಫಸಲು ಕೈಗೆ ಬಂದದ್ದು ಬಾಯಿಗೆ ಬರುವ ಮುನ್ನವೇ ಕಾಡಾನೆಗಳ ಹಸಿವಿಗೆ ಆಹುತಿಯಾ ಗಿರುವ ಪ್ರಸಂಗ ಹಾರಂಗಿ ಜಲಾ ಶಯದ ಬಲ ದಂಡೆಯ ಅತ್ತೂರು ಗ್ರಾಮದಲ್ಲಿ ನಿತ್ಯವೂ ಅನ್ನದಾತರು ಅನುಭವಿಸುತ್ತಿರುವ ನರಕ ಯಾತನೆಯಾಗಿದೆ.
ಲಕ್ಷಾಂತರ ರೂ.ಗಳ ವ್ಯಯ ಮಾಡಿ ಬೆಳೆದಂತಹ ಜೋಳದ ಫಸಲನ್ನು ಕಾಡಾನೆಗಳು ಗುಂಪು ಗುಂಪಾಗಿ ಬಂದು ತಿಂದು ಹಾಗೂ ತುಳಿದು ಅಪಾರ ಪ್ರಮಾಣದಲ್ಲಿ ಫಸಲು ನಷ್ಟ ಮಾಡುತ್ತಿದೆ.
ಅತ್ತೂರು ಗ್ರಾಮದ ಎಸ್.ಪಿ. ನರೇಂದ್ರ, ಹೆಚ್.ಅರ್.ಸುರೇಶ್, ಕೆ.ಬಿ.ಉಮೇಶ್, ಕೆ.ಡಿ.ಕಾವ್ಯ, ಹೆಚ್.ಕೆ.ಕುಶಾಲಪ್ಪ, ರಾಜೇಶ್, ಕರ್ಣಯ್ಯನ ಲೋಹಿತಾಶ್ವ, ಬಿ.ಎ.ರಮೇಶ್, ಸಿದ್ದಾರ್ಥ, ರಫೀಕ್, ಜಯಚೆಂಗಪ್ಪ ಸೇರಿದಂತೆ ಕಾಡಂಚಿನ ಬಹುತೇಕ ರೈತರು ಬೆಳೆದಂತಹ ಅಪಾರ ಪ್ರಮಾಣದ ಜೋಳದ ಫಸಲನ್ನು ಕಾಡಾನೆಗಳ ಹಿಂಡು ತಿಂದು ತುಳಿದು ಸಂಪೂರ್ಣ ನಾಶಪಡಿಸಿವೆ.
ಹಾಗೆಯೇ ಪುಲಿಯಂಡ ರಾಮು, ಲವ, ಶ್ರೀನಿವಾಸ್, ಜೋಯಪ್ಪ ಅವರಿಗೆ ಸೇರಿದ ಕಾಫಿ ಗಿಡಗಳು, ತಂಗಚ್ಚನ್ ಎಂಬವರಿಗೆ ಸೇರಿದ ಅಡಿಕೆ, ತೆಂಗು, ಬಾಳೆ ಮೊದಲಾದ ಫಸಲು ಕೂಡ ಅಪಾರ ಪ್ರಮಾಣದಲ್ಲಿ ನಾಶವಾಗಿವೆ.
ಅಪಾಯದಿಂದ ಪಾರಾದ ಕೃಷಿಕ: ಶನಿವಾರ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ತಮ್ಮ ತೋಟದ ಮರವೊಂದರಲ್ಲಿ ನಿರ್ಮಿಸಿದ್ದ ಅಟ್ಟಣಿಗೆಯನ್ನು ಏರಿ ಕುಳಿತು ಕಾಡಾನೆಗಳನ್ನು ಕಾವಲು ಕಾಯುತ್ತಿದ್ದ ಕೃಷಿಕ ನರೇಂದ್ರ, ತಮ್ಮ ಕೈಯಲ್ಲಿದ್ದ ಮೊಬೈಲ್‌ನಲ್ಲಿ ಹಾಡು ಕೇಳುತ್ತಿದ್ದ ಸಂದರ್ಭ ಹಾಡಿನ ಸದ್ದು ಹಾಗೂ ಮೊಬೈಲ್ ಬೆಳಕು ಕಂಡ ಒಂಟಿ ಸಲಗ ಅಟ್ಟಣಿಗೆಯ ಬಳಿಯೇ ಬಂದು ಜೋರಾಗಿ ಘೀಳಿಟ್ಟಿದೆ.
ಅದೃಷ್ಟವಶಾತ್ ಒಂಟಿ ಸಲಗ ಸನಿಹವೇ ಇದ್ದ ಫಸಲು ತುಂಬಿದ ಜೋಳದ ಹೊಲದೊಳಕ್ಕೆ ನುಗ್ಗಿ ಮನಬಂದAತೆ ತಿಂದು ತುಳಿದು ಬೆಳೆಯನ್ನು ನಾಶಗೈದಿದೆ.
ಆನೆ ಹಿಂಡು ದಾಳಿ : ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಉಮೇಶ್ ಅವರ ಹೊಲಕ್ಕೆ ಧಾವಿಸಿದ ಇನ್ನೊಂದು ಕಾಡಾನೆ ಹಿಂಡು ಅರ್ಧ ಎಕರೆಗೂ ಹೆಚ್ಚು ಜೋಳದ ಫಸಲನ್ನು ತಿಂದು ನಾಶ ಪಡಿಸಿವೆ. ಉಮೇಶ್ ಅವರು ಕಾಡಾನೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಹೊಲದ ಸುತ್ತಲೂ ಕಾಂಕ್ರೀಟ್ ಕಂಬಗಳನ್ನು ನೆಟ್ಟು ಅದರಲ್ಲಿ ಕಬ್ಬಿಣದ ತಂತಿಗಳ ಸಹಾಯ ದಿಂದ ಬೇಲಿ ನಿರ್ಮಿಸಿದ್ದರು.
ಆದರೆ ಬೇಲಿಯ ಕಾಂಕ್ರೀಟ್ ಕಂಬವನ್ನೇ ಮುರಿದ ಕಾಡಾನೆಗಳು ಹೊಲದೊಳಗೆ ತೆರಳಿ ಹೊಟ್ಟೆ ತುಂಬಿಸಿಕೊAಡು ಮರಳಿವೆ ಎಂದು ಉಮೇಶ್ ವಿವರಿಸಿದರು.
ಅತ್ತೂರು ಗ್ರಾಮದ ಹೆಚ್.ಆರ್.ಸುರೇಶ್ ಅವರಿಗೆ ಸೇರಿದ ನಾಲ್ಕು ಎಕರೆ ಜೋಳದ ಹೊಲದ ಪೈಕಿ ಬರೋಬ್ಬರಿ ಎರಡು ಎಕರೆ ಜೋಳದ ಫಸಲನ್ನು ಮತ್ತೊಂದು ಕಾಡಾನೆಗಳ ಹಿಂಡು ನಾಶಪಡಿಸಿವೆ.
ಮರವೊಂದರ ಮೇಲೆ ಅಟ್ಟಣಿಗೆ ನಿರ್ಮಿಸಿ ಅದರೊಳಗೆ ಕುಳಿತು ಕಾಡಾನೆಗಳಿಗೆ ಟಾರ್ಚ್ನಿಂದ ಬೆಳಕು ಬಿಟ್ಟಾಗ ಅಟ್ಟಣಿಗೆಯ ಬಳಿ ಘೀಳಿಟ್ಟು ಬಂದ ಕಾಡಾನೆ ಅಟ್ಟಣಿಗೆಯನ್ನು ನೆಲಕ್ಕೆ ಬೀಳಿಸಿ ನಾಶ ಪಡಿಸಿ ಹೋದ ಬಗ್ಗೆ ಸುರೇಶ್ ವಿವರಿಸಿದರು.
ಜೋಳದ ಫಸಲನ್ನು ತಿನ್ನಲು ಹಸಿದ ಹೊಟ್ಟೆಯಿಂದ ಧಾವಿಸುವ ಕಾಡಾನೆಗಳು ಮಾರ್ಗಮಧ್ಯೆ ಸಿಗುವ ಕಾಫಿ ಫಸಲನ್ನು ನಾಶ ಪಡಿಸುತ್ತಿವೆ ಎಂದು ಪುಲಿಯಂಡ ಲವ ನಾಣಯ್ಯ ದೂರಿದರು.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು, ನಾಡಿಗೆ ಧಾವಿಸುವ ಕಾಡಾನೆಗಳನ್ನು ಕಾಡಿಗೆ ಮರಳಿಸಲು ಅರಣ್ಯ ಇಲಾಖೆ ಅನುಷ್ಟಾನಕ್ಕೆ ತಂದಿರುವ ಕಾಡಾನೆ ತಡೆಯ ಟಾಸ್ಕ್ ಪೋರ್ಸ್ಗೆ ಕರೆ ಮಾಡಿದರೆ ನಾವು ಬೇರೆಡೆ ಇದ್ದೇವೆ. ಇರೋದು ಒಂದೇ ತಂಡ ಎಂದು ಹೇಳಿ ಜಾರಿಕೊಳ್ಳು ತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಯ ಸಹಾಯವಾಣಿ ೧೯೨೬ ಈ ಸಂಖ್ಯೆಗೆ ಕರೆ ಮಾಡಿದರೆ ಅದು ಕಾರ್ಯಾ ಚರಿಸುತ್ತಿಲ್ಲ. ಡೆಡ್ ಆಗಿದೆ. ಕೃಷಿಕರಿಗೆ ಪ್ರಯೋಜನವಾಗದ ಕಾರ್ಯಪಡೆಗಳ ಅಗತ್ಯ ವೇನಿದೆ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ನಿತ್ಯವೂ ಬೆಳೆ ತಿನ್ನಲು ಧಾವಿಸುವ ಕಾಡಾನೆ ಹಿಮ್ಮೆಟ್ಟಿಸಲು ರಾತ್ರಿ ಹೊಲಕ್ಕೆ ತೆರಳಿದ್ದ ಗ್ರಾಮದ ಬೆಳ್ಳಿಪ್ಪಾಡಿ ಲೋಕೇಶ್ ಎಂಬ ಕೃಷಿ ಕನ ಮೇಲೆ ಕಳೆದ ಆರು ತಿಂಗಳ ಹಿಂದೆ ಮಾರಣಾಂತಿಕ ಧಾಳಿ ನಡೆ ಸಿದ ಕಾಡಾನೆಯಿಂದ ಬದುಕುಳಿದ ಲೋಕೇಶ್ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಅರಣ್ಯ ಇಲಾಖೆ ಚಿಕಿತ್ಸೆಗೆ ಹಣ ನೀಡಿದೆಯಾದರೂ ಆ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಿಲ್ಲ. ಹಾಗಾಗಿ ಈಗಲೂ ಈ ಕೃಷಿಕ ಲೋಕೇಶ್ ಸ್ವಾಧೀನ ಕಳೆದುಕೊಂಡು ಮಲಗಿ ದ್ದಲ್ಲೇ ಕೃಷವಾಗಿದ್ದಾರೆ. ಹಾಗಾಗಿ ಗ್ರಾಮದ ರೈತರು ಕಾಡಾನೆಗಳ ನಿತ್ಯದ ಹಾವಳಿಯಿಂದ ಹೈರಾಣಾಗಿದ್ದಾರೆ.
ಗ್ರಾಮಕ್ಕೆ ಗ್ರಾಮವೇ ಕಾಡಾನೆಗಳ ಹಿಂಡು ಧಾಳಿಗೆ ಬೆಳೆ ನಷ್ಟ ಹಾಗೂ ಜೀವ ನಷ್ಟಕ್ಕೆ ಒಳಗಾಗುತ್ತಿ ರುವುದರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಪರಿಶೀಲನೆ ನಡೆಸಬೇಕು.
ಕಾಡಂಚಿನ ಪ್ರತಿಯೊಬ್ಬ ಕೃಷಿಕರ ಸಂಕಷ್ಟ ಅರಿತು, ಈಗಾಗಲೇ ಆಗಿರುವ ಬೆಳೆ ನಷ್ಟಕ್ಕೆ ನ್ಯಾಯೋಚಿತವಾದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.