ವೀರಾಜಪೇಟೆ, ಸೆ. ೨೪: ಮಲಯಾಳಿ ಬಾಂಧವರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓಣಂ ಹಬ್ಬವನ್ನು ಒಗ್ಗಟ್ಟಿನಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆಯ ಮೀನುಪೇಟೆ ಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಕಲಾ ಮಂಟಪದಲ್ಲಿ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಲಯಾಳಂ ಸಂಸ್ಕೃತಿಯನ್ನು ಬಿಂಬಿಸುವ ಓಣಂ ಹಬ್ಬ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಗಡಿ ಭಾಗವಾದ ವೀರಾಜಪೇಟೆಯಲ್ಲಿ ವಿಜೃಂಬಣೆಯ ಓಣಂ ಆಚರಣೆ ಮುಂದೆಯು ನಡೆಯುವಂತಾಗಲಿ ಎಂದು ಶುಭ ಕೋರಿದ ಶಾಸಕ ಪೊನ್ನಣ್ಣ ಅವರು ಮಲಯಾಳಿ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.

ಸಮಾರAಭದ ಅಧ್ಯಕ್ಷತೆ ವಹಿಸಿದ ಓಣಂ ಆಚರಣಾ ಸಮಿತಿ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಮಲಯಾಳಿ ಬಾಂಧವರು ಕೊಡಗಿನ ಅನೇಕ ಕಡೆಗಳಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಆ ದಿನಗಳಲ್ಲಿ ಪರೀಕ್ಷೆ ಹಾಗೂ ಶಾಲಾ ಕಾಲೇಜು ಇರುವುದರಿಂದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಓಣಂ ಆಚರಣೆ ದಿನ ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಕೊಡಗು ಮಲಯಾಳಿ ಸಮಾಜದ ಸೋಮವಾರಪೇಟೆ ಅಧ್ಯಕ್ಷ ವಿ.ಎಂ. ವಿಜೆಯನ್ ಮಾತನಾಡಿ, ಮಲಯಾಳಿ ಬಾಂಧವರು ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು ಹಾಗೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತಾಗಬೇಕು ಎಂದರು. ಎಸ್.ಎನ್.ಡಿ.ಪಿ. ಜಿಲ್ಲಾ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ ಉತ್ತಮ ಆಡಳಿತ, ನಾಯಕತ್ವ ಹಾಗೂ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದು ಸಮಿತಿಯ ಜವಾಬ್ದಾರಿ. ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದರು.

ಜಿಲ್ಲಾ ಮಲಯಾಳಿ ಸಮಾಜ ಸ್ಥಾಪಕ ಅಧ್ಯಕ್ಷ, ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓಣಂ ಹಬ್ಬದಲ್ಲಿ ಹೂವಿನ ರಂಗೋಲಿ ೧೦ ದಿನಗಳು ಬಿಡಿಸಬೇಕು, ಮಕ್ಕಳು ದುಶ್ಚಟಗಳನ್ನು ದೂರಮಾಡಿ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದರು.

ಮೊದಲಿಗೆ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಜ್ಯೋತಿ ಬೆಳಗುವುದರೊಂದಿಗೆ ಓಣಂ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸಿಂಗಾರಿ ಮೇಳಂ, ಕೇರಳದ ಚೆಂಡೆ ಮದ್ದಳೆ, ಕಥಕಳಿ ನೃತ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಸಾಗಿ ಹಿಂದಿರುಗಿ ದೇವಾಲಯಕ್ಕೆ ಬಂದ ನಂತರ ಮಧ್ಯಾಹ್ನ ಕೇರಳದ ಖಾದ್ಯಗಳಿಂದ ತಯಾರಿಸಲಾದ ವಿಶೇಷ ಭೊಜನ (ಓಣಂ ಸದ್ಯ) ನಡೆಯಿತು. ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ ಏರ್ಪಡಿಸ ಲಾಗಿತ್ತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ‘ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವೀರಾಜಪೇಟೆ’ ಎಂದು ಲೋಗೋ ಬಿಡುಗಡೆ ಗೊಳಿಸಲಾಯಿತು.

ವೇದಿಕೆಯಲ್ಲಿ ಕ್ರೀಡಾಪಟು ಸಿ.ಕೆ. ಭಾಗ್ಯಲಕ್ಷ್ಮಿ, ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಮಡಿಕೇರಿಯ ಟಿ.ಕೆ. ಸುಧೀರ್, ಚೆಟ್ಟಳ್ಳಿಯ ಕೆ.ಕೆ. ಸುರೇಶ್ ಬಾಬು, ಗೋಣಿಕೊಪ್ಪ ವಿ.ವಿ. ಅರುಣ್ ಕುಮಾರ್, ಮುರ್ನಾಡು ಕೆ. ಬಾಬು ಅವರುಗಳು ಉಪಸ್ಥಿತರಿದ್ದರು. ಎಂ.ಎA. ಶಶಿಧರನ್ ಸ್ವಾಗತಿಸಿದರೆ, ಕಾರ್ಯದರ್ಶಿ ಸಿ.ಆರ್. ಬಾಬು ವರದಿ ವಾಚಿಸಿ, ರಾಜೇಶ್ ವಂದಿಸಿದರು. ಸಮಾರಂಭದಲ್ಲಿ ಕೊಡಗಿನ ಇತರೆಡೆಗಳಿಂದಲು ಭಾಗವಹಿಸಿದ್ದರು.